ADVERTISEMENT

ಆರ್‌ಆರ್‌ ನಗರ: ಅಂದಾಜುಪಟ್ಟಿಯಿಲ್ಲದೆ ತುರ್ತು ಕಾಮಗಾರಿ, ₹150 ಕೋಟಿ ಅಕ್ರಮ!

ಲೋಕಾಯುಕ್ತ ಪ್ರಾಥಮಿಕ ತನಿಖೆಯಿಂದ ಹಗರಣಕ್ಕೆ ಸಾಕ್ಷ್ಯ

ಆರ್. ಮಂಜುನಾಥ್
Published 17 ಜೂನ್ 2023, 0:19 IST
Last Updated 17 ಜೂನ್ 2023, 0:19 IST
ಲೋಕಾಯುಕ್ತ ಕಚೇರಿ
ಲೋಕಾಯುಕ್ತ ಕಚೇರಿ   

ಬೆಂಗಳೂರು: ರಾಜರಾಜೇಶ್ವರಿ ನಗರ ವಲಯದಲ್ಲಿ ಆಯುಕ್ತರ ಅನುಮತಿಯೇ ಇಲ್ಲದೆ ತುರ್ತು ಕಾಮಗಾರಿಗಳಿಗೆ ₹7.77 ಕೋಟಿಯನ್ನು ಪಾವತಿಸಿರುವುದು ಲೋಕಾಯುಕ್ತ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

2014ರಿಂದ 2018ರವರೆಗೆ ಡಿ.ಸಿ. ಬಿಲ್‌ಗಳ ಮೂಲಕ ₹196 ಕೋಟಿ ಮೊತ್ತದ ಕಾಮಗಾರಿಗಳ ಲೆಕ್ಕ ತೋರಿಸಲಾಗಿದೆ. ಈ ಮೊತ್ತದ ಪೈಕಿ ಕಾಮಗಾರಿಗಳನ್ನು ನಡೆಸದಿದ್ದರೂ  ₹150 ಕೋಟಿ ಹಣ ಪಾವತಿಸಲಾಗಿದೆ ಎಂದು ದೂರಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಹಗರಣದ ಸಾಕ್ಷ್ಯ ದೊರೆತಿದ್ದು, ಸಂಪೂರ್ಣ ದಾಖಲಾತಿಗಳ ಪತ್ತೆಗೆ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಬಿಬಿಎಂಪಿಯ ಆಡಳಿತ ಪ‍ಕ್ಷ ಮಾಜಿ ನಾಯಕ ರಮೇಶ್‌ ಎನ್.ಆರ್‌. ಅವರು 2018ರ ಜ.23ರಂದು ನೀಡಿದ್ದ ದೂರಿನನ್ವಯ, ಲೋಕಾಯುಕ್ತ ತನಿಖಾಧಿಕಾರಿ ಅವರು ರಾಜರಾಜೇಶ್ವರಿ ನಗರ ಜಂಟಿ ಆಯುಕ್ತರಿಗೆ ಮೇ 17ರಂದು ಪತ್ರ ಬರೆದಿದ್ದಾರೆ. 16 ಎಂಜಿನಿಯರ್‌ಗಳು ನೀಡಿರುವ ಅನುಮೋದನೆಯ ಕಡತಗಳನ್ನು ದೃಢೀಕರಿಸಿ ನೀಡುವಂತೆ ಕೋರಿದ್ದಾರೆ.

ADVERTISEMENT

ಪತ್ರದ ಸಾರಾಂಶ: ವಾರ್ಡ್‌ಗಳ ವ್ಯಾಪ್ತಿಯಲ್ಲಿ ಅನಿರೀಕ್ಷಿತ ಸಂದರ್ಭಗಳಲ್ಲಿ ಆಯಾ ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್‌, ಆಯಾ ವಲಯಗಳ ಮುಖ್ಯ ಎಂಜಿನಿಯರ್‌ ಮತ್ತು ಅಂತಿಮವಾಗಿ ಜಂಟಿ ಆಯುಕ್ತರ ಅನುಮೋದನೆ ಪಡೆದ ನಂತರ ತುರ್ತು ಕಾಮಗಾರಿ ಮಾಡಲಾಗುತ್ತದೆ. ಈ ತುರ್ತು ಕಾರ್ಯಗಳಿಗೆ ಸಂಬಂಧಿಸಿದ ಅಂದಾಜು ಪಟ್ಟಿಯಲ್ಲಿರುವಂತೆ ಕೆಲಸಗಳು ಪೂರ್ಣಗೊಂಡ ನಂತರ ಹಣ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಡಿ.ಸಿ. ಬಿಲ್‌ (ಡೀಟೈಲ್ಡ್‌ ಕಂಟಿಂಜೆನ್ಸಿ ಬಿಲ್‌) ಎಂದು ಕರೆಯಲಾಗುತ್ತದೆ. 

ನಿಯಮಾನುಸಾರ ‌ಡಿ.ಸಿ ಬಿಲ್ ಮೊತ್ತ ₹1 ಲಕ್ಷಕ್ಕಿಂತ ಕಡಿಮೆ ಇರಬೇಕು. ಅದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಕೆಟಿಪಿಪಿ ಕಾಯ್ದೆ ಅನ್ವಯ ಟೆಂಡರ್‌ ಆಹ್ವಾನಿಸಬೇಕು. ಆದರೆ, ರಾಜರಾಜೇಶ್ವರಿನಗರ ವಲಯದ ವ್ಯಾಪ್ತಿಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ಯಶವಂತಪುರ ವಿಧಾನಸಭೆ ಕ್ಷೇತ್ರಗಳಿಗೆ ಸೇರಿದ 14 ವಾರ್ಡ್‌ಗಳಿವೆ. ಈ ವ್ಯಾಪ್ತಿಯಲ್ಲಿ 2014–15, 2015–16, 2016–17 ಮತ್ತು 2017–18ನೇ ಸಾಲಿನ 45 ತಿಂಗಳಲ್ಲಿ ₹196,71,58,052 ಮೊತ್ತದ ಡಿ.ಸಿ. ಬಿಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶೇ 80ರಷ್ಟು ಹಣವನ್ನು ತುರ್ತು ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದ್ದು, ಇದರಲ್ಲಿ ಕಾಮಗಾರಿ ನಡೆಸದೇ ಬಿಲ್ ಪಾವತಿಸಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.

ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಡಿ.ಸಿ. ಬಿಲ್‌ಗಳ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಮೂಲಕ ಬಿಬಿಎಂಪಿಗೆ ವಂಚನೆ, ನಕಲಿ ದಾಖಲೆ ತಯಾರಿಕೆ, ನಂಬಿಕೆ ದ್ರೋಹ, ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಪ್ರಕರಣಗಳು 16 ಎಂಜಿನಿಯರ್‌ಗಳ ಮೇಲೆ ದಾಖಲಿಸಬೇಕೆಂದು ಅರ್ಜಿದಾರರು ಕೋರಿದ್ದರು.

ನಗರಾಭಿವೃದ್ಧಿ ಉಪ ಕಾರ್ಯದರ್ಶಿ–3 ಹಾಗೂ ಮುಖ್ಯ ಜಾಗೃತ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದಾಗ 2014ರಿಂದ 2018ರವರೆಗೆ ಆರ್.ಆರ್‌. ನಗರ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಕಂಟಿಂಜೆನ್ಸಿ ವೆಚ್ಚಗಳಿಗೆ ನಿಗದಿಯಾಗಿರುವ ₹7.77 ಕೋಟಿಯನ್ನು ಡಿ.ಸಿ. ಬಿಲ್‌ಗಳ ಮೂಲಕ ಆಯುಕ್ತರ ಅನುಮತಿ ಇಲ್ಲದೆ ಪಾವತಿಸಿರುವುದು ಕಂಡು ಬಂದಿದೆ. ಹೀಗಾಗಿ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ದೃಢೀಕರಿಸಿ ವಿಚಾರಣೆಗೆ ನೀಡಬೇಕು ಎಂದು ಮೇ 17ರಂದು ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಉಲ್ಲೇಖಿಸಿ, ರಾಜರಾಜೇಶ್ವರಿ ನಗರ ವಲಯದ ಮುಖ್ಯ ಎಂಜಿನಿಯರ್‌ ಅವರು ಕೆಂಗೇರಿ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಜೂನ್‌ 9ರಂದು ಟಿಪ್ಪಣಿ ಬರೆದು, ದೃಢೀಕೃತ ದಾಖಲೆ ಸಲ್ಲಿಸಲು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.