ರಾಜರಾಜೇಶ್ವರಿನಗರ: ‘ಹೊಸಕೆರೆ, ಮಲ್ಲತ್ತಹಳ್ಳಿ ಕೆರೆ, ಜೆ.ಪಿ.ಪಾರ್ಕ್ ಅಭಿವೃದ್ಧಿ ಹೆಸರಿನಲ್ಲಿ ಕೆರೆ ಕಣ್ಮರೆ, ಈಜುಕೊಳ ಮರು ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ ಹೆಸರಿನಲ್ಲಿ ನಡೆದಿದೆ ಎನ್ನಲಾದ ಎಲ್ಲ ಅಕ್ರಮಗಳನ್ನು ಬಯಲಿಗೆ ಎಳೆಯುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮತ್ತಿಕೆರೆಯ ಜೆಪಿ ಪಾರ್ಕ್ ಚೌಡೇಶ್ವರಿ ಬಸ್‍ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಆರ್.ಆರ್. ನಗರ ಕ್ಷೇತ್ರ ವ್ಯಾಪ್ತಿಗೆ ಬರುವ ಹೊಸಕೆರೆ ಹಳ್ಳಿಯ ಹೊಸಕೆರೆ ಬಳಿ ಬೇನಾಮಿ ಹೆಸರಿನಲ್ಲಿ ಶಾಸಕರು ಜಮೀನು ಖರೀದಿ ಮಾಡಿದ್ದಾರೆ. ಆ ಜಮೀನಿಗೆ ಹೋಗಲು ಕೆರೆ ಮಧ್ಯದಲ್ಲಿಯೇ ರಸ್ತೆ ಮಾಡಿದ್ದಾರೆ. ಕೆರೆ ಅಭಿವೃದ್ದಿ ಹೆಸರಿನಲ್ಲಿ ಲೂಟಿ ನೋಡಿಕೊಂಡು ಸುಮ್ಮನಿರುವುದೇ? ಅಭಿವೃದ್ದಿ ಮಾಡದೆ ನೂರಾರು ಕೋಟಿ ಹಣ ಲೂಟಿ ಮಾಡಲಾಗಿದೆ’ ಎಂದು ದೂರಿದರು.
‘ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಆರ್.ಆರ್. ನಗರದಲ್ಲಿ ನಡೆದಿರುವ ಅಕ್ರಮ, ಕಳಪೆ ಕಾಮಗಾರಿ ತನಿಖೆ ನಡೆಸಲು ಸಿದ್ಧ. ಯಾವ ರೀತಿಯಲ್ಲಿ ಬಿಜೆಪಿ ಶಾಸಕರು ಮೋಸ ಮಾಡಿ ಗೆಲುವು ಸಾಧಿಸಿದ್ದಾರೆ ಎಂಬುದನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸಲಾಗುವುದು’ ಎಂದು ಹೇಳಿದರು.
‘ಶೀಘ್ರದಲ್ಲಿಯೇ ಬಿಬಿಎಂಪಿ, ಲೋಕಸಭಾ ಚುನಾವಣೆ ಬರಲಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬೆಂಗಳೂರು ಅಭಿವೃದ್ಧಿಗೆ ಶಕ್ತಿ ನೀಡಬೇಕು’ ಎಂದು ಮನವಿ ಮಾಡಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ‘ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ತೊಳೆಯಲು ವೇಲು ನಾಯಕರ್, ಜಿ.ಮೋಹನಕುಮಾರ್, ಸಿದ್ದೇಗೌಡ, ಶ್ರೀನಿವಾಸ ಮೂರ್ತಿ ಮತ್ತು ಬಿಜೆಪಿ ಕಾರ್ಯಕರ್ತರು ಬಂದಿದ್ದಾರೆ. ಮೂಲ ವಲಸಿಗರು ಎನ್ನದೇ ಎಲ್ಲರೂ ಒಂದಾಗಿ ಕಾಂಗ್ರೆಸ್ ಅನ್ನು ಸಂಘಟನೆ ಮಾಡಿ ಸರ್ಕಾರದ ಯೋಜನೆಗಳನ್ನು ಬಡವರು, ಜನ ಸಾಮಾನ್ಯರಿಗೆ ತಲುಪಿಸಬೇಕಾಗಿದೆ’ ಎಂದು ಹೇಳಿದರು.
ಕಾಂಗ್ರೆಸ್ ನಾಯಕಿ ಎಚ್.ಕುಸುಮಾ ಮಾತನಾಡಿ, ‘ನಾನೆಂದು ದ್ವೇಷದ ರಾಜಕಾರಣ ಮಾಡುವುದಿಲ್ಲ. ಕೊಳೆತು ಹೋಗಿರುವ ಹಣ್ಣಿಗೆ ಕಲ್ಲು ಹೊಡೆಯುವ ಕೆಲಸ ಮಾಡುವುದಿಲ್ಲ. ಅದೇ ಕೆಳಗೆ ಬೀಳುತ್ತದೆ. ಮೋಸ, ವಂಚನೆಗೆ, ಭಗವಂತ ನೋಡಿಕೊಳ್ಳುತ್ತಾನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.