ಬೆಂಗಳೂರು: ಪ್ರತಿಷ್ಠೆಯ ಕಣವಾಗಿದ್ದ ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಕೊನೆಯ ಏಳು ಸುತ್ತಿನ ಮತ ಎಣಿಕೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್‌ನ ಕುಸುಮಾ ಅವರನ್ನು ಸೋಲಿಸಿದ್ದಾರೆ.
ರಾಜರಾಜೇಶ್ವರಿ ನಗರ ವಾರ್ಡ್‌ನಲ್ಲಿ ಬಿಜೆಪಿಗೇ ಮೀಸಲಾಗಿರುವ ಮತಗಳು ಕೊನೆಯ ಹಂತದಲ್ಲಿ ಮುನಿರತ್ನ ಅವರಿಗೆ ಅತಿ ಹೆಚ್ಚಿನ ರೀತಿಯಲ್ಲಿ ಕೈಹಿಡಿದು, ಸೋಲಿನ ದವಡೆಯಿಂದ ಹೊರಗೆಳೆದವು. ಕೊನೆಯ ಐದು ಹಂತದಲ್ಲಿ ರಾಜರಾಜೇಶ್ವರಿ ನಗರ ವಾರ್ಡ್‌ನ ಮತಗಳು ಎಣಿಕೆಯಾಗಿದ್ದು, ಅವು ಮುನಿರತ್ನ ಅವರಿಗೆ ಭಾರಿ ಮುನ್ನಡೆ ತಂದುಕೊಟ್ಟ ಜೊತೆಗೆ, ಜಯ ಸಾಧಿಸಲೂ ಕಾರಣವಾದವು.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಸಾಕಷ್ಟು ವಿರೋಧ ಕಟ್ಟಿಕೊಂಡಿದ್ದ ಮುನಿರತ್ನ ಅವರಿಗೆ ಕುಸುಮಾ ಭಾರಿ ಪೈಪೋಟಿ ನೀಡಿದ್ದರು. ತಮಗೆ ಪ್ರತಿಸ್ಪರ್ಧಿಯೇ ಇಲ್ಲ ಎಂಬಷ್ಟರ ಮಟ್ಟಿಗೆ ಮುನಿರತ್ನ ಉತ್ಸಾಹದಲ್ಲಿದ್ದರು. ಆದರೆ, ದಿನದಿಂದ ದಿನಕ್ಕೆ ಪ್ರಯಾಸ ಹೆಚ್ಚಾಯಿತು. ಕುಸುಮಾ ಅವರ ಬೆನ್ನೆಲುಬಾಗಿ ಸಂಸದ ಡಿ.ಕೆ. ಸುರೇಶ್ ಕಾರ್ಯಕರ್ತರನ್ನು ಒಗ್ಗೂಡಿಸಿದರು. ಕುಸುಮಾ ಮಹಿಳೆಯರ ಒಲವು ಪಡೆಯಲು ಓಡಾಡಿದರು. ಕೊಳೆಗೇರಿಗಳ ಮತಗಳು ಈ ಬಾರಿ ಕಾಂಗ್ರೆಸ್ ಕೈಹಿಡಿದವು. ಮುನಿರತ್ನ ಕಡೆಗಣಿಸಿದ್ದ ಪಕ್ಕಾ ಬಿಜೆಪಿ ಪ್ರದೇಶದ ಮತಗಳೇ ಅವರಿಗೆ ಗೆಲುವು ತಂದುಕೊಟ್ಟವು.
ಕಾಂಗ್ರೆಸ್‌ನಿಂದ 2013 ಹಾಗೂ 2018ರಲ್ಲಿ ಗೆಲುವು ಸಾಧಿಸಿದ್ದ ಮುನಿರತ್ನ, ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ್ದರು. 2019ರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸಚಿವರೂ ಆದರು. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ವಿವಾದಗಳು ಸೃಷ್ಟಿಯಾಗಿ, 2018ರಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹದ ವಿಷಯ ಕೋರ್ಟ್ ಮೆಟ್ಟಿಲೇರಿ ಮತದಾನವೇ ವಿಳಂಬವಾಗಿತ್ತು. 2019ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ ಮೇಲೂ ಸಚಿವರಾಗಲು ಸಾಕಷ್ಟು ಪ್ರಯಾಸ ಪಟ್ಟಿದ್ದರು.
26ನೇ ಸುತ್ತಿನ ಮತ ಎಣಿಕೆವರೆಗೆ ಮುನ್ನಡೆಯಲ್ಲಿದ್ದ ಕುಸುಮಾ ಅವರಿಗೆ 27ನೇ ಸುತ್ತಿನಲ್ಲಿ ಹಿನ್ನೆಡೆಯಾಯಿತು. 26ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ 1,07,252 ಮತಗಳಿಸಿತ್ತು. ಬಿಜೆಪಿ 1,06,048 ಮತ ಪಡೆದಿತ್ತು. 27ನೇ ಸುತ್ತಿನಲ್ಲಿ ಮುನಿರತ್ನ 5,242 ಮತ ಪಡೆದರೆ, ಕುಸುಮಾ 2,546 ಮತಗಳನ್ನಷ್ಟೇ ಪಡೆದು ಹಿನ್ನಡೆಯಾದರು. ನಂತರದ ಮೂರು ಸುತ್ತಿನಲ್ಲಿ ಕ್ರಮವಾಗಿ 7913, 6513, 1531 ಮತಗಳನ್ನು ಮುನಿರತ್ನ ಪಡೆದರು. ಇವೇ ಸುತ್ತಿನಲ್ಲಿ ಕುಸುಮಾ ಕ್ರಮವಾಗಿ 2,353, 3,001, 488 ಮತ ಪಡೆದರು.
ಕೊನೆಯ ನಾಲ್ಕು ಸುತ್ತಿನಲ್ಲಿ ಬಿಜೆಪಿ 15,957 ಮತ ಪಡೆದರೆ, ಕಾಂಗ್ರೆಸ್ 5,842 ಮತಗಳನ್ನಷ್ಟೇ ಪಡೆಯಿತು. ಹೀಗಾಗಿ, ಅಂತಿಮವಾಗಿ 1,27,980 ಮತ ಪಡೆದ ಮುನಿರತ್ನ, 11,842 ಮತಗಳ ಅಂತರದಿಂದ ಜಯ ಸಾಧಿಸಿದರು.
ಚಿಕ್ಕಪೇಟೆ ‘ಉದಯ’: ‘ಕೈ’ಗೆ ಮುಳುವಾದ ‘ಕೆಜಿಎಫ್’
ಬೆಂಗಳೂರು: ಜಿದ್ದಾಜಿದ್ದಿಗೆ ಹೆಸರಾದ ಚಿಕ್ಕಪೇಟೆ ಕ್ಷೇತ್ರದಲ್ಲಿ ಮತ್ತೆ ‘ಕಮಲ’ ಅರಳಿದೆ. ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಸತತ 2ನೇ ಬಾರಿಗೆ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇವರಾಜ್ ಮತ್ತೆ ನಿರಾಸೆ ಅನುಭವಿಸಿದರು.
ಅಭ್ಯರ್ಥಿಗಳ ಮತಗಳಿಕೆ ಪ್ರಮಾಣ ಗಮನಿಸಿದರೆ ದೇವರಾಜ್ ಅವರಿಗೆ ಪಕ್ಷೇತರ ಅಭ್ಯರ್ಥಿ ಯುಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರೇ ಅಡ್ಡಗಾಲು ಆಗಿರುವುದು ಸ್ಪಷ್ಟವಾಗಿದೆ. ಬಾಬು ಅವರು ನಿರೀಕ್ಷೆಗೂ ಮೀರಿ ಮತಗಳಿಸಿದ್ದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಕಸಿದುಕೊಳ್ಳಲು ಯಶಸ್ವಿ ಆಗಿದ್ದಾರೆ.
ಬಿಜೆಪಿ 57,299 ಮತ ಗಳಿಸಿದ್ದರೆ, ಕಾಂಗ್ರೆಸ್ 45,186 ಮತ ಪಡೆದಿದೆ. ಬಿಜೆಪಿ ಅಭ್ಯರ್ಥಿ 12,113 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ಧಾರೆ. ಬಾಬು ಅವರು 20,931 ಮತ ಗಳಿಸಿದ್ದು ಕಾಂಗ್ರೆಸ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದಾರೆ. ಬಾಬು ಹೆಚ್ಚು ಪ್ರಚಾರ ಮಾಡಿದಂತೆ ಕ್ಷೇತ್ರದಲ್ಲಿ ಬಿಜೆಪಿಗೆ ವರವಾಗುತ್ತಲೇ ಹೋಗಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.
ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಬಾಬು ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ವರಿಷ್ಠರು ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದರೂ ಹಿಂದೆ ಸರಿದಿರಲಿಲ್ಲ. ಎರಡು ವರ್ಷದಿಂದಲೂ ಬಾಬು
ಕ್ಷೇತ್ರದಾದ್ಯಂತ ಓಡಾಟ ನಡೆಸಿದ್ದು ಅದು ಮತಗಳಾಗಿ ಪರಿವರ್ತನೆಗೊಂಡಿವೆ.
ಕಣದ ಸ್ಪಷ್ಟ ಚಿತ್ರಣ ಲಭ್ಯ ಆಗುತ್ತಿದ್ದಂತೆ ಎಚ್ಚೆತ್ತ ಉದಯ್ ಅವರು ಬಾಬು ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿ ಮಾಡಿ ರೂಪಿಸಿದ ‘ತಂತ್ರಗಾರಿಕೆ’ಯೂ ಕಮಲದ ಓಟಕ್ಕೆ ನೆರವಾಗಿದೆ. ತೆರೆಮರೆಯಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆದರೂ ಕಾಂಗ್ರೆಸ್ ಉದಾಸೀನ ತೋರಿತು. ಅದೇ ಮುಳುವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚಾಮರಾಜಪೇಟೆಯಿಂದ ವಲಸೆ ಬಂದಿದ್ದ ಜೆಡಿಎಸ್ ಅಭ್ಯರ್ಥಿ ಇಮ್ರಾನ್ ಪಾಷಾ 1,588 ಹಾಗೂ ಆಮ್ ಆದ್ಮಿ ಪಾರ್ಟಿಯ ಬ್ರುಜೇಶ್ ಕಾಳಪ್ಪ 600 ಮತ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಎಎಪಿ ಬಿರುಸಿನ ಪ್ರಚಾರ ನಡೆಸಿದ್ದರೂ ಅದು ಫಲ ಕೊಟ್ಟಿಲ್ಲ. ಬೇರೆ ರಾಜ್ಯದಿಂದ ವಲಸೆ ಬಂದವರು ಕಮಲದತ್ತ ಒಲವು ತೋರಿರುವುದು ಫಲಿತಾಂಶದಲ್ಲಿ ಹೊರಹೊಮ್ಮಿದೆ.
ಇತರೆ ಪಕ್ಷಗಳ ನೀರಸ ಸಾಧನೆ: ಕಾಂಗ್ರೆಸ್ ಪಕ್ಷಕ್ಕೆ ವರ
ಬೆಂಗಳೂರು: ಗುಜರಾತ್, ಉತ್ತರ ಪ್ರದೇಶಗಳ ಚುನಾವಣೆಯಂತೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಮಧ್ಯೆ ಮತ ವಿಭಜನೆ ಆಗದೇ ಇರುವುದು ಅಧಿಕ ಸ್ಥಾನಗಳನ್ನು ಗಳಿಸುವಲ್ಲಿ ಕಾಂಗ್ರೆಸ್‌ಗೆ ವರವಾಗಿದೆ.
ದೆಹಲಿ, ಪಂಜಾಬ್‌ನಲ್ಲಿ ಅಧಿಕಾರದ ಗದ್ದುಗೆ ಹಿಡಿದು ಜನಪರ ಕಾರ್ಯಗಳ ಮೂಲಕ ಗಮನ ಸೆಳೆದಿದ್ದ ಆಮ್ ಆದ್ಮಿ ಪಕ್ಷ ಇಲ್ಲೂ 209 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಕರ್ನಾಟಕ ರಾಷ್ಟ್ರಸಮಿತಿ 195, ಬಹುಜನ ಸಮಾಜ ಪಕ್ಷ 133, ಉತ್ತಮ ಪ್ರಜಾಕೀಯ ಪಕ್ಷ 110, ಎಸ್‌ಡಿಪಿಐ 16 ಕ್ಷೇತ್ರಗಳಲ್ಲಿ ಸ್ಪರ್ಧೆ ಒಡ್ಡಿದ್ದವು. ಕಮ್ಯುನಿಸ್ಟ್ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳೂ ಅಲ್ಲಲ್ಲಿ ಕಣದಲ್ಲಿದ್ದವು. ಆದರೆ, ಕೆಲ ಕ್ಷೇತ್ರಗಳನ್ನು ಹೊರತು ಪಡಿಸಿದರೆ ಈ ಯಾವ ಪಕ್ಷಗಳ ಅಭ್ಯರ್ಥಿಗಳೂ ಸಾವಿರ ಮತಗಳ ಗಡಿ ದಾಟಿಲ್ಲ. ಇದರಿಂದ ಜಾತ್ಯತೀತ ಮತಗಳ ವಿಭಜನೆಯಾಗದೇ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸುಲಭವಾಗಿದೆ.
ಪ್ರಚಾರ ನಡೆಸದಿದ್ದರೂ ಕೈ ಹಿಡಿದ ಮತದಾರ!
ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಅಹಮದ್ ಖಾನ್ ಅವರು ಮತ್ತೊಮ್ಮೆ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದ ಜಮೀರ್, ಸ್ವಕ್ಷೇತ್ರಕ್ಕಿಂತ ರಾಜ್ಯದ ಬೇರೆ ಕ್ಷೇತ್ರಗಳಲ್ಲಿಯೇ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದೇ ಹೆಚ್ಚು.
ಸ್ವಕ್ಷೇತ್ರದಲ್ಲಿ ಪ್ರಚಾರ ಉಸ್ತುವಾರಿಯನ್ನು ಆತ್ಮೀಯರು ಹಾಗೂ ಬೆಂಬಲಿಗರಿಗೆ ವಹಿಸಿದ್ದರು. ಬಹಿರಂಗ ಪ್ರಚಾರ ಕೊನೆಯ ದಿನ ಕ್ಷೇತ್ರಕ್ಕೆ ಬಂದು ಮನೆ ಮನೆ ಪ್ರಚಾರ ನಡೆಸಿದ್ದರು.
‘ನಾನು ಚುನಾವಣೆಗೆ ಬರುವ ಅತಿಥಿ ಅಲ್ಲ. ಐದು ವರ್ಷವೂ ನಿಮ್ಮ ಜತೆಗಿರುವ ವ್ಯಕ್ತಿ’ ಎಂದು ಭಾವನಾತ್ಮಕ ಮಾತನ್ನಾಡಿದ್ದರು. ಅದು ಕೈಹಿಡಿದಂತೆ ಕಾಣಿಸುತ್ತಿದೆ. ಜಮೀರ್‌ಗೆ 77,532 ಮತಗಳು ಬಂದಿವೆ. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ವಿರುದ್ಧ 53,983 ಮತಗಳ ಅಂತರದಲ್ಲಿ ಜಮೀರ್ ಗೆದ್ದಿದ್ದಾರೆ. ಭಾಸ್ಕರ್ ರಾವ್ 23,549 ಮತಗಳನ್ನು ಮಾತ್ರ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.