ಬೆಂಗಳೂರು: ‘ನಾನು ಪ್ರೊ. ರಾಜೀವ್ ಗೌಡ, ಐಐಎಂನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದೆ. ಈಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಅಭಿವೃದ್ಧಿಗಾಗಿ ನನಗೆ ಮತ ನೀಡಿ..’
ಹೀಗೆ ತಮ್ಮನ್ನು ಪೂರ್ಣವಾಗಿ ಪರಿಚಯಿಸಿಕೊಳ್ಳುತ್ತಾ, ಪಕ್ಕಾ ‘ಪ್ರೊಫೆಸರ್’ ಶೈಲಿಯಲ್ಲಿ ಮತಯಾಚಿಸಿದರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ.ರಾಜೀವ್ ಗೌಡ. ಹಲವು ಚುನಾವಣೆಗಳಲ್ಲಿ ನೂರಾರು ಅಭ್ಯರ್ಥಿಗಳು ಮತ ಕೇಳುತ್ತಿದ್ದ ಪರಿಯನ್ನು ಕಂಡಿದ್ದ ನಾಗರಿಕರು, ರಾಜೀವ್ ಗೌಡರು ಭಿನ್ನ ಶೈಲಿಯಲ್ಲಿ ಮತಯಾಚಿಸುವುದನ್ನು ಅಚ್ಚರಿಯಿಂದ ನೋಡುತ್ತಿದ್ದರು.
ಗುರುವಾರ ಬೆಳಿಗ್ಗೆ 7.40ಕ್ಕೆ ಮಗಳು ರಿಷಿಕಾ ಜೊತೆಗೆ ಬೆಳಗಿನ ಉಪಾಹಾರಕ್ಕಾಗಿ ಮಲ್ಲೇಶ್ವರದ ಸಿಟಿಆರ್ ಹೋಟೆಲ್‌ಗೆ ಬಂದರು. ಮಸಾಲದೋಸೆ, ‘ಬ್ಲ್ಯಾಕ್ ಟಿ’ಗೆ ಆರ್ಡರ್ ಮಾಡಿದರು. ಅದು ಬರುವವರೆಗೆ, ಗ್ರಾಹಕರೊಂದಿಗೆ ಮಾತಿಗಿಳಿದರು. ಇಂಗ್ಲಿಷ್, ಕನ್ನಡ ಹೀಗೆ ಎರಡೂ ಭಾಷೆಯಲ್ಲೂ ಜನರೊಟ್ಟಿಗೆ ಮಾತನಾಡಿದರು. ಜನರು ಅಷ್ಟೇ ಆಪ್ತವಾಗಿ ಪ್ರತಿಕ್ರಿಯಿಸಿದರು. ಪಕ್ಕದ ಟೇಬಲ್‌ನಲ್ಲಿ ಕುಟುಂಬವೊಂದು ಉಪಾಹಾರ ಸೇವಿಸುತ್ತಿತ್ತು. ಆ ಗುಂಪಿನಲ್ಲಿ ತಾತನೊಂದಿಗಿದ್ದ ಮಗುವನ್ನು ರಾಜೀವ್‌ಗೌಡರು ಮಾತನಾಡಿಸಿದರು. ಆಗ ಎದುರು ಕುಳಿತಿದ್ದವರು ‘ಅದು ನಮ್ಮ ಮಗು’ ಎಂದು ತಿಳಿಸಿದರು. ‘ಓ ಹೌದಾ... ನೋಡಿ, ಇದು ನನ್ನ ಮಗು’ ಎಂದು ಮಗಳು ರಿಷಿಕಾರನ್ನು ತೋರಿಸಿ ಪ್ರೊಫೆಸರ್ ನಗೆ ಚಟಾಕಿ ಹಾರಿಸಿದರು!
ದೋಸೆ ಸವಿಯುತ್ತಲೇ ತಮ್ಮ ಪಕ್ಷದವರೊಂದಿಗೆ ಮತದಾರರನ್ನು ಸೆಳೆಯುವ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ರಿಷಿಕಾ ಕೂಡಾ ಅಪ್ಪನ ಪರವಾಗಿ ಪ್ರಚಾರ ನಡೆಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲೇಶ್ವರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅನೂಪ್ ಅಯ್ಯಂಗಾರ್, ಕಾಂಗ್ರೆಸ್ ವಕ್ತಾರರಾದ ನಂದನ್, ನಟರಾಜ್ ಗೌಡ ಸಹಿತ ಕಾಂಗ್ರೆಸ್ ಮುಖಂಡರು ಪ್ರೊಫೆಸರ್‌ಗೆ ಸಾಥ್ ನೀಡಿದರು.
ಮಲ್ಲೇಶ್ವರದಿಂದ ಗುಟ್ಟಹಳ್ಳಿ ವಾರ್ಡ್‌ಗೆ ತೆರಳಿದ ರಾಜೀವ್ ಗೌಡರಿಗೆ, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಕೂಗಿ ಸ್ವಾಗತಿಸಿದರು. ಅಲ್ಲಿಂದ ಸ್ವಲ್ಪ ದೂರ ಪಾದಯಾತ್ರೆ ಮೂಲಕವೇ ಮತಯಾಚಿಸಿದರು. ಬಳಿಕ ತೆರೆದ ವಾಹನ ಏರಿ, ಜನರತ್ತ ಕೈ ಮುಗಿಯುತ್ತಾ ಸಾಗಿದರು. ಬೀದಿ, ಬೀದಿಗಳಲ್ಲಿ ಪ್ರಚಾರದ ಮೆರವಣಿಗೆ ಸಾಗಿತು. ಕಾರ್ಯಕರ್ತರು ಮನೆ ಮನೆಗೆ ಕರಪತ್ರ ಹಂಚಿದರು. ರಾಜೀವ್ ಗೌಡರನ್ನು ಗುಣಗಾನ ಮಾಡುವ ಗೀತೆಗಳು ಮೊಳಗಿದವು. ಬಿಸಿಲಿನ ಬೇಗೆಗೆ ಬಾಯಾರದಂತೆ ಅಲ್ಲಲ್ಲಿ ಪಾನೀಯ ಸೇವಿಸಿದರು. ಕಾಡುಮಲ್ಲೇಶ್ವರ ಸುತ್ತಮುತ್ತ ಪ್ರಚಾರ ಮುಗಿಸಿ ಬ್ಯಾಟರಾಯನಪುರಕ್ಕೆ ತೆರಳಿದರು.
ಮಧ್ಯಾಹ್ನ ಬ್ಯಾಟರಾಯನಪುರ ಕೋದಂಡರಾಮ ಸ್ವಾಮಿ ಜಾತ್ರೆಯಲ್ಲಿ ತೇರು ಎಳೆಯುವ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡರೊಂದಿಗೆ ಪಾಲ್ಗೊಂಡರು. ವಿಶೇಷ ಪೂಜೆ, ಪ್ರಾರ್ಥನೆಗಳನ್ನು ನೆರವೇರಿಸಿದ ಬಳಿಕ ಭಕ್ತರಿಗೆ ಅನ್ನ ಪ್ರಸಾದ ಬಡಿಸಿದರು. ಹೆಣ್ಣೂರು, ಹೊರಮಾವುಗಳಲ್ಲಿ ರೋಡ್‌ಶೋ, ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರುವ ಕಾರ್ಯಕ್ರಮದಲ್ಲಿ ಭಾಗಿಯಾದರು.
‘ಟ್ರೆಡಿಶನಲ್ ಜೊತೆಗೆ ಅಡಿಶನಲ್ ವೋಟು ಬರಲಿದೆ
ಕಾಂಗ್ರೆಸ್‌ನ ಸಾಂಪ್ರದಾಯಿಕ (ಟ್ರೆಡಿಶನಲ್) ಮತಗಳ ಜೊತೆಗೆ ಬಿಜೆಪಿಗೆ ಹೋಗುತ್ತಿದ್ದ ಮತಗಳು ಹೆಚ್ಚುವರಿಯಾಗಿ(ಅಡಿಶನಲ್) ನನಗೆ ಬರಲಿವೆ’ ಎಂದು ಎಂ.ವಿ. ರಾಜೀವ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ‘ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಚೆನ್ನಾಗಿದೆ. ಜನರು ತಮ್ಮ ಬಗ್ಗೆ ಕಾಳಜಿ ತೋರುವ ತಿಳಿವಳಿಕೆ ಹೊಂದಿರುವ ಉತ್ತಮ ಶೈಕ್ಷಣಿಕ ಹಿನ್ನೆಲೆಯಿರುವ ಕ್ಷೇತ್ರಕ್ಕಾಗಿ ದುಡಿಯುವ ಅಭ್ಯರ್ಥಿಯ ನಿರೀಕ್ಷೆಯಲ್ಲಿದ್ದರು. ಈಗ ನಾನು ಅಭ್ಯರ್ಥಿಯಾಗಿರುವುದನ್ನು ಕಂಡ ಮೇಲೆ ‘ನಿರೀಕ್ಷೆಗಳು ಈಡೇರುತ್ತವೆ‘ ಎಂಬ ಭರವಸೆ ಜನರಲ್ಲಿ ಮೂಡಿದೆ‘ ಎಂದು ಹೇಳಿದರು. ‘ಒಕ್ಲಹೋಮ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಐಎಎಂ ಬೆಂಗಳೂರಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ಇನ್ನೊಂದೆಡೆ ರಾಜ್ಯ ನೀತಿ ಮತ್ತು ಆಯೋಗದ ಉಪಾಧ್ಯಕ್ಷನಾಗಿ ಕೆಪಿಸಿಸಿ ಅಪಾರ್ಟ್‌ಮೆಂಟ್ ಸೆಲ್ ಅಧ್ಯಕ್ಷನಾಗಿ ರಾಜ್ಯಸಭೆ ಸದಸ್ಯನಾಗಿ ಆರ್‌ಬಿಐ ಕೇಂದ್ರೀಯ ಮಂಡಳಿ ನಿರ್ದೇಶಕನಾಗಿ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಸದಸ್ಯನಾಗಿ ಸಾರ್ವಜನಿಕ ನೀತಿ ಕೇಂದ್ರ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವವಿದೆ. ಇವೆಲ್ಲವನ್ನೂ ಬಳಸಿಕೊಳ್ಳಬೇಕು ಎಂಬುದು ಮತದಾರರ ಅಪೇಕ್ಷೆಯಾಗಿದೆ’ ಎಂದು ವಿವರಿಸಿದರು. ‘10 ವರ್ಷಗಳಲ್ಲಿ ಜನರು ಅನುಭವಿಸಿದ ಸಂಕಷ್ಟಗಳು ಮತ್ತು ಕಳೆದ 10 ತಿಂಗಳಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಂಕಷ್ಟದಿಂದ ಪಾರು ಮಾಡಿರುವುದು ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅದೇ ನನ್ನ ಗೆಲುವಿನ ಅಡಿಪಾಯ’ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.