ADVERTISEMENT

ಕಸ್ತೂರಿ ರಂಗನ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ * 49 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 15:54 IST
Last Updated 9 ಜೂನ್ 2023, 15:54 IST
ಕೆ.ಕಸ್ತೂರಿ ರಂಗನ್
ಕೆ.ಕಸ್ತೂರಿ ರಂಗನ್   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್, ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ.ಪಿ.ಸತೀಶ್ ಚಂದ್ರ ಹಾಗೂ ವೈದ್ಯ ಡಾ.ಎಂ.ಕೆ.ಸುದರ್ಶನ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘ಗೌರವ ಡಾಕ್ಟರೇಟ್’ ಪದವಿಗೆ ಆಯ್ಕೆಯಾಗಿದ್ದಾರೆ. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್, ‘ಈ ವರ್ಷ 49,560 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 51 ಪಿಎಚ್.ಡಿ, 150 ಸೂಪರ್ ಸ್ಪೆಷಾಲಿಟಿ, 7,351 ಸ್ನಾತಕೋತ್ತರ ಪದವಿ, 22 ಸ್ನಾತಕೋತ್ತರ ಡಿಪ್ಲೊಮಾ ಪದವಿ, 277 ಫೆಲೋಶಿಪ್ ಕೋರ್ಸ್, 9 ಸರ್ಟಿಫಿಕೇಟ್ ಕೋರ್ಸ್ ಹಾಗೂ 41,700 ಪದವಿ ವಿದ್ಯಾರ್ಥಿಗಳು ಸೇರಿದ್ದಾರೆ. ಎಲ್ಲಾ ನಿಕಾಯಗಳ ಒಟ್ಟು ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ಶೇ 84.26 ರಷ್ಟಿದೆ. ಕಳೆದ ವರ್ಷ ಶೇ 82.25 ರಷ್ಟಿತ್ತು. ಫಲಿತಾಂಶದಲ್ಲಿ ಏರಿಕೆ ಕಂಡಿದೆ’ ಎಂದರು.

‘ರಾಜ್ಯದಲ್ಲಿ ಒಟ್ಟು 97 ವಿದ್ಯಾರ್ಥಿಗಳು 108 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಪಿಇಎಸ್ ಕಾಲೇಜಿನ ಫಾರ್ಮಸಿ ವಿದ್ಯಾರ್ಥಿನಿ ಕೆ.ದೀಪ್ತಿ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ನಲ್ಲಿ ರಜನಿ ಪಂತ್‌ ಅವರು ತಲಾ 3 ಚಿನ್ನದ ಪದಕ ಪಡೆಯಲು ಅರ್ಹರಾಗಿದ್ದಾರೆ. ಶಿವಮೊಗ್ಗದ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ ರಿಷಿಕಾ ಎಸ್. ಪಟೇಲ್, ದಿ ಆಕ್ಫ್‌ಫರ್ಡ್ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿ ಅಮೋಘ ಸಾರಥಿ, ಮೂಡಬಿದ್ರೆ ಆಳ್ವಾಸ್ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಟಿ.ಸಾಯಿ ಚಿನ್ಮಯಿ ಅವರು ತಲಾ 2 ಚಿನ್ನದ ಪದಕ ಮತ್ತು 1 ನಗದು ಬಹುಮಾನವನ್ನು ಪಡೆಯಲಿದ್ದಾರೆ. ಚಿನ್ನದ ಪದಕವು 5 ಗ್ರಾಂ ತೂಕ ಹೊಂದಿರಲಿದೆ’ ಎಂದು ಹೇಳಿದರು.

ADVERTISEMENT

ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಎನ್.ರಾಮಕೃಷ್ಣ ರೆಡ್ಡಿ, ‘ಈ ಬಾರಿ ಫಲಿತಾಂಶ ಹೆಚ್ಚಳಕ್ಕೆ ನೂತನ ಮೌಲ್ಯಮಾಪನ ಪದ್ಧತಿಯೇ ಮುಖ್ಯ ಕಾರಣ. ಈ ಮೊದಲು ಎರಡು ಬಾರಿ ಮೌಲ್ಯಮಾಪನ ಮಾಡಿ, ಎರಡು ಫಲಿತಾಂಶದ ಸರಾಸರಿಯನ್ನು ಪರಿಗಣಿಸಲಾಗುತ್ತಿತ್ತು. 2022ರ ಸೆಪ್ಟಂಬರ್ ಬಳಿಕ ಮೌಲ್ಯಮಾಪನದಲ್ಲಿ ಅಧಿಕ ಅಂಕವನ್ನು ಪರಿಗಣಿಸಲಾಗುತ್ತಿದೆ. ಇದರಿಂದ ಫಲಿತಾಂಶ ಹೆಚ್ಚಳವಾಗುತ್ತಿದೆ’ ಎಂದು ತಿಳಿಸಿದರು.

 ಡಾ.ಪಿ.ಸತೀಶ್ ಚಂದ್ರ
ಡಾ.ಎಂ.ಕೆ. ಸುದರ್ಶನ್
ಇಂದು ಘಟಿಕೋತ್ಸವ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವು ಶನಿವಾರ ಬೆಳಿಗ್ಗೆ 11 ಗಂಟೆಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಜೆ.ಎನ್.ಟಾಟಾ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ. ಬಿ.ವರಾಲೆ ಭಾಗವಹಿಸಲಿದ್ದಾರೆ. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. 
2 ವೈದ್ಯಕೀಯ ಕಾಲೇಜು
‘ಚನ್ನಪಟ್ಟಣದಲ್ಲಿ ರಾಜರಾಜೇಶ್ವರಿ ಶಿಕ್ಷಣ ಸಮೂಹದ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಚಿತ್ರದುರ್ಗದ ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023-24ನೇ ಸಾಲಿನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಲಿವೆ. ತಲಾ 150 ಸೀಟುಗಳ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ’ ಎಂದು ಡಾ.ಎಂ.ಕೆ.ರಮೇಶ್ ತಿಳಿಸಿದರು. ‘ವೈದ್ಯಕೀಯ ಪ್ರವೇಶ ಶುಲ್ಕದ ವಿಚಾರ ಇನ್ನೂ ಚರ್ಚೆಯಲ್ಲಿದೆ. ಪ್ರವೇಶ ಮೇಲ್ವಿಚಾರಣಾ ಸಮಿತಿ ನಿಗದಿ ಮಾಡುವ ಶುಲ್ಕಕ್ಕೆ ಸರ್ಕಾರ ಅನುಮೋದನೆ ನೀಡಿದ ಬಳಿಕ ಶುಲ್ಕ ಅಂತಿಮವಾಗಲಿದೆ. ಡೀಮ್ಡ್ ವಿಶ್ವವಿದ್ಯಾಲಯಗಳ ಶುಲ್ಕ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.