ಬೆಂಗಳೂರು:ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಗುರುವಾರಮತ್ತೆ ಆರಂಭಿಸಿದೆ. ಮುನ್ನೇನಕೊಳಲು, ಶಾಂತಿನಿಕೇತನ ಲೇಔಟ್ ಹಾಗೂ ಎಬಿಕೆ ಹಳ್ಳಿಯಲ್ಲಿ ಆರು ಸ್ಥಳಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ.
ಮುನ್ನೇನಕೊಳಲು ಹಾಗೂ ಶಾಂತಿನಿಕೇತನ ಲೇಔಟ್‌ನಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ ಎರಡು ಕಟ್ಟಡ ಹಾಗೂ ಎರಡು ಶೆಡ್‌ಗಳನ್ನು ನೆಲಸಮಗೊಳಿಸಲಾಗಿದೆ.ಅಮಾನಿ ಬೆಳ್ಳಂದೂರು ಖಾನೆ(ಎಬಿಕೆ) ಹಳ್ಳಿ ವ್ಯಾಪ್ತಿಯಲ್ಲಿ ಒಂದು ಶೆಡ್ ಹಾಗೂ ಸುಮಾರು 60 ಮೀಟರ್ ಉದ್ದದ ಕಾಂಪೌಂಡ್ ತೆರವುಗೊಳಿಸಲಾಗಿದೆ.
ತಹಶೀಲ್ದಾರ್ ಅವರು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ ನಂತರ ಬಾಕಿ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಮಹದೇವಪುರ ವಲಯ ವ್ಯಾಪ್ತಿಯಲ್ಲಿ 2015-16ರಿಂದ ಇದುವರೆಗೆ ಒಟ್ಟಾರೆ 1,174 ರಾಜಕಾಲುವೆ ಒತ್ತುವರಿಗಳನ್ನು ಗುರುತಿಸಲಾಗಿದೆ. ಈ ಪೈಕಿ 1032 ಒತ್ತುವರಿಗಳನ್ನು ತೆರವುಗೊಳಿಸಲಾಗಿದ್ದು, 142 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದೆ. ಈ ಪೈಕಿ 11 ಪ್ರಕರಣಗಳು ನ್ಯಾಯಾಲಯಕ್ಕೆ ಸಂಬಂಧಿಸಿದ್ದಾಗಿವೆ. ಇನ್ನು 131 ಒತ್ತುವರಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ವೆ ಕಾರ್ಯವನ್ನು ನಡೆಸುತ್ತಿದ್ದು, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.