ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಜನರನ್ನು ಸಂಕಷ್ಟಕ್ಕೀಡು ಮಾಡುವ ರಾಜಕಾಲುವೆ ಒತ್ತುವರಿ ಪ್ರಕರಣಗಳು ದಿನದಿಂದ ದಿನಕ್ಕೆ ಮತ್ತಷ್ಟು ಪತ್ತೆಯಾಗುತ್ತಲೇ ಇವೆ. ಮಳೆಗಾಲಕ್ಕೆ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆ ಮುಗಿಯುವ ಲಕ್ಷಣ ಇಲ್ಲದಿರುವುದರಿಂದ ಮತ್ತೆ ಆತಂಕ ಎದುರಾಗಿದೆ.
ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದರೂ, ಇನ್ನೂ 784 ಒತ್ತುವರಿ ಪ್ರಕರಣಗಳು ತೆರವಿಗೆ ಬಾಕಿ ಇವೆ. ಈ ವರ್ಷ ಫೆಬ್ರುವರಿ 21ರ ನಂತರ ಒಂದೂ ಪ್ರಕರಣದಲ್ಲಿ ತೆರವು ಕಾರ್ಯಾಚರಣೆಯಾಗಿಲ್ಲ. ಜನವರಿಯಿಂದ ಫೆಬ್ರುವರಿ 21ರವರೆಗೆ 88 ಪ್ರದೇಶದಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗಿದೆ.
ಮಳೆಗಾಲಕ್ಕೆ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆ ಮುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿಯಾದಿಯಾಗಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜಕಾಲುವೆ ವಿಭಾಗದ ಎಂಜಿನಿಯರ್‌ಗಳು ಹೇಳಿದ್ದರು. ಆದರೆ, ಅವರೇ ನೀಡಿರುವ ಅಂಕಿ–ಅಂಶದ ಪ್ರಕಾರ ಈ ವರ್ಷ ತೆರವು ಕಾರ್ಯಾಚರಣೆ ನಡೆದಿಲ್ಲ. ತುರ್ತು ಕಾಮಗಾರಿಗಳನ್ನು ನಿರ್ವಹಿಸಬೇಕಿರುವುದರಿಂದ ರಾಜಕಾಲುವೆ ವಿಭಾಗದ ಸಿಬ್ಬಂದಿಗೆ ಚುನಾವಣೆ ಕೆಲಸದಿಂದಲೂ ಮುಕ್ತಗೊಳಿಸಲಾಗಿತ್ತು.
‘ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ. ಒಂದು ತೆಗೆಯುವ ಸಂದರ್ಭದಲ್ಲಿ ಮತ್ತೊಂದಷ್ಟು ಪತ್ತೆಯಾಗುತ್ತಿವೆ. ಹೀಗಾಗಿ ಸಂಖ್ಯೆಗಳು ಮತ್ತೆ ಹೆಚ್ಚಾಗುತ್ತಲೇ ಇವೆ’ ಎನ್ನುತ್ತಾರೆ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ.
ಒತ್ತುವರಿ ತೆರವಿಗಿಂತ ಇರುವ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಎಂಜಿನಿಯರ್‌ಗಳು ಹೆಚ್ಚು ಒತ್ತು ನೀಡಿದ್ದಾರೆ. ಇದಕ್ಕಾಗಿ ಸುಮಾರು ₹1,500 ಕೋಟಿ ವೆಚ್ಚ ಮಾಡಲಾಗುತ್ತಿದೆ. ಎಲ್ಲಿ ನಿರ್ಮಾಣವಾಗುತ್ತಿದೆ, ಎಷ್ಟು ನಿರ್ಮಾಣವಾಗುತ್ತಿದೆ ಎಂಬುದರ ವಿವರವನ್ನು ಎಂಜಿನಿಯರ್‌ಗಳು ನೀಡುತ್ತಿಲ್ಲ.
ರಾಜಕಾಲುವೆಗಳ ‘ಕಾಂಕ್ರೀಟ್’ ಮರುನಿರ್ಮಾಣ ಕಾರ್ಯವೂ ಇನ್ನೊಂದು ವರ್ಷ ಮುಗಿಯುವುದಿಲ್ಲ. ಆದರೆ, ಮಳೆಗಾಲದಲ್ಲಿ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವ ಕೆಲಸ ಆಗಿಲ್ಲ ಎಂಬುದನ್ನು ಮೇ ಆರಂಭದಲ್ಲಿ ಸುರಿದ ಮಳೆಯೇ ಬಹಿರಂಗಪಡಿಸಿದೆ. ಮಳೆಗಾಲ ಆರಂಭವಾಗಲು ಇನ್ನೊಂದು ತಿಂಗಳಲ್ಲಿ ರಾಜಕಾಲುವೆಯಲ್ಲಿನ ಅಡೆ–ತಡೆಗಳನ್ನು ನಿವಾರಿಸುವ ಕೆಲಸವಾಗಬೇಕಿದೆ. ಅಷ್ಟೊಂದು ಯುದ್ಧೋಪಾದಿಯಲ್ಲಿ ಬಿಬಿಎಂಪಿ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ ಜನರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಪರಿಸರ ತಜ್ಞ ನಾಗೇಶ್ ಅರಸ್ ಆತಂಕ ವ್ಯಕ್ತಪಡಿಸಿದರು.
20 ಕಡೆ ಮಾರ್ಗ ಬದಲು:
ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ 20 ಸ್ಥಳಗಳಲ್ಲಿ ರಾಜಕಾಲುವೆ ಮಾರ್ಗವನ್ನೇ ಬದಲಿಸಲಾಗಿದೆ. ಮೂಲ ರಾಜಕಾಲುವೆ ಹರಿವನ್ನು ಬದಲಿಸಿ ಹೊಸ ಮಾರ್ಗ ಮಾಡಲಾಗಿದೆ ಎಂದು ಬಿಬಿಎಂಪಿ ಅಂಕಿ–ಅಂಶದಲ್ಲೇ ತಿಳಿಸಲಾಗಿದೆ.
ತೆರವು ಪೂರ್ಣಗೊಂಡಿಲ್ಲ:
ತುಷಾರ್ ಗಿರಿನಾಥ್ ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇತ್ತೀಚೆಗೆ ಕಾಮಗಾರಿಗಳ ಪರಿಶೀಲನೆ ನಡೆದಿಲ್ಲ. ಶೀಘ್ರವೇ ಮಾಡಲಾಗುತ್ತದೆ. ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮತ್ತಷ್ಟು ಒತ್ತುವರಿ ಪ್ರಕರಣಗಳೂ ಪತ್ತೆಯಾಗಿರುವುದು ನಿಜ. ಎಲ್ಲವನ್ನು ತೆರವುಗೊಳಿಸಲಾಗುತ್ತದೆ’ ಎಂದರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ‘ರಾಜಕಾಲುವೆ ಒತ್ತುವರಿ ತೆರವು ಇನ್ನೂ ಪೂರ್ಣಗೊಂಡಿಲ್ಲ. ರಾಜಕಾಲುವೆಗೆ ತಡೆಗೋಡೆ ಕಾಮಗಾರಿಗಳೂ ನಡೆಯುತ್ತಿವೆ. ಸದ್ಯಕ್ಕೆ ಅಂದರೆ ಮಳೆಗಾಲದ ವೇಳೆಗೆ ಪೂರ್ಣಗೊಳ್ಳುವುದಿಲ್ಲ. ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ಹೊಸ ರಾಜಕಾಲುವೆ ಸೃಷ್ಟಿ?
‘ಕಂದಾಯ ಇಲಾಖೆಯ ದಾಖಲೆಗಳಲ್ಲಿ ಕಾಲುವೆಗಳು ಇಲ್ಲ. ಆದರೆ ಕೆಲವು ಪ್ರದೇಶಗಳಲ್ಲಿ ಕಾಲುವೆಗಳ ಅಗತ್ಯವಿದ್ದು ಅದನ್ನು ನಿರ್ಮಿಸಬೇಕಿದೆ. ಹೀಗಾಗಿ ಎಲ್ಲಿ ಕಾಲುವೆ ನಿರ್ಮಿಸಬೇಕಾದ ಅನಿವಾರ್ಯತೆ ಇದೆಯೋ ಅಲ್ಲಿ ಭೂಮಿ ವಶಪಡಿಸಿಕೊಂಡು ಟಿಡಿಆರ್ ನೀಡುವ ಆಲೋಚನೆ ಇದೆ’ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ರಾಜಕಾಲುವೆಗಳಿವೆ ಎಂದರೆ ಅದಕ್ಕೆ ಬಫರ್ ಝೋನ್ ಇದ್ದೇ ಇರಬೇಕು. ಆದರೆ ಇದೀಗ ಬಿಬಿಎಂಪಿ ಸೃಷ್ಟಿಸಲು ಹೊರಟಿರುವ ಕಾಲುವೆಗಳ ಸೃಷ್ಟಿ ಅಥವಾ ವಿಸ್ತರಣೆ ಸುತ್ತಮುತ್ತ ಬಫರ್ ಝೋನ್ ಇಲ್ಲ. ಅವುಗಳು ಕಂದಾಯ ದಾಖಲೆಯಲ್ಲಿ ಇಲ್ಲದಿರುವುದೇ ಕಾರಣ. ಹೀಗಾಗಿ ಬಿಬಿಎಂಪಿ ಬೃಹತ್ ಕಟ್ಟಡಗಳನ್ನು ಉಳಿಸುವ ದೃಷ್ಟಿಯಿಂದ ಹೊಸ ಕಾಲುವೆ ಸೃಷ್ಟಿಸುತ್ತಿದೆ. ಟಿಡಿಆರ್ ನೀಡಿ ದೊಡ್ಡವರಿಗೆ ಅನುಕೂಲವನ್ನೂ ಮಾಡಿಕೊಡಲು ಮುಂದಾಗಿದೆ ಎಂದು ಪರಿಸರ ತಜ್ಞರು ಆರೋಪಿಸುತ್ತಿದ್ದಾರೆ.
ರಾಜಕಾಲುವೆ ಒತ್ತುವರಿ ವಿವರ ವಲಯ;
ಒಟ್ಟು ಒತ್ತುವರಿ ಪ್ರಕರಣ;2016–17ರಲ್ಲಿ ತೆರವು;2018–19ರಿಂದ 2022ರವರೆಗೆ ತೆರವು;2022 ಆಗಸ್ಟ್‌ನಿಂದ 2022ರ ನವೆಂಬರ್‌ವರೆಗೆ ತೆರವು;2023ರಲ್ಲಿನ ತೆರವು;ಒಟ್ಟು ತೆರವು;ಕೋರ್ಟ್‌ನಲ್ಲಿರುವ ಪ್ರಕರಣ;ಬಾಕಿ ಪೂರ್ವ;237;3;124;4;3;103;88 ಪಶ್ಚಿಮ;52;11;1;6;9;25;0;4 ದಕ್ಷಿಣ;23;0;0;0;0;23;0;0 ಕೋರಮಂಗಲ ಕಣಿವೆ;10;7;0;0;0;3;0;3 ಯಲಹಂಕ;588;215;277;10;7;79;0;79 ಮಹದೇವಪುರ;1446;98;867;119;57;305;62;243 ಬೊಮ್ಮನಹಳ್ಳಿ;344;40;188;20;10;86;56;30 ಆರ್.ಆರ್. ನಗರ;75;37;0;0;2;36;0;36 ದಾಸರಹಳ್ಳಿ;176;16;23;13;0;124;0;124 ಒಟ್ಟು;2951;427;1480;172;88;784;118;607
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.