ADVERTISEMENT

‘ಸಣ್ಣ ಮಳೆ ಬಂದ್ರೂ ಮನ್ಯಾಗ ನೀರು ಬರ್ತಾದ’

ವಿವೇಕನಗರ: ಮರಿಯಪ್ಪ ಗಾರ್ಡನ್‌ ಹಿಂಭಾಗದ ರಾಜಕಾಲುವೆ ಸಮೀಪದ ಜನರ ಅಳಲು

ಕಲಾವತಿ ಬೈಚಬಾಳ
Published 3 ಸೆಪ್ಟೆಂಬರ್ 2018, 19:44 IST
Last Updated 3 ಸೆಪ್ಟೆಂಬರ್ 2018, 19:44 IST
ವಿವೇಕನಗರದ ರವಿ ಚಿತ್ರಮಂದಿರದ ಬಳಿ ಇರುವ ರಾಜಕಾಲುವೆ ಗೋಡೆ ಕುಸಿದು ಬಿದ್ದಿದೆ –ಪ್ರಜಾವಾಣಿ ಚಿತ್ರಗಳು/ ರಂಜು ಪಿ.
ವಿವೇಕನಗರದ ರವಿ ಚಿತ್ರಮಂದಿರದ ಬಳಿ ಇರುವ ರಾಜಕಾಲುವೆ ಗೋಡೆ ಕುಸಿದು ಬಿದ್ದಿದೆ –ಪ್ರಜಾವಾಣಿ ಚಿತ್ರಗಳು/ ರಂಜು ಪಿ.   

ಬೆಂಗಳೂರು: ‘ಜೋರ್‌ ಮಳೆ ಬಂದಾಗ್ಲೆಲ್ಲ ಮೋರಿ ನೀರು ಮನ್ಯಾಗ ನುಗ್ಗತಾದ. ಸೊಂಟದ ಮಟಾ ನೀರ್‌ ನಿಂದರ್ತಾದ. ಒಮ್ಮೊಮ್ಮೆ ಇಡೀ ಮನೀನ ಮುಳುಗ್ತಾದ’–ಹೀಗೆ ಹೇಳಿದ್ದು, ವಿವೇಕನಗರದ ಮರಿಯಪ್ಪ ಗಾರ್ಡನ್‌ ಹಿಂಭಾಗದ ರಾಜಕಾಲುವೆ ಪಕ್ಕದಲ್ಲಿಯೇ ಶೆಡ್‌ ನಿರ್ಮಿಸಿಕೊಂಡಿರುವ ಕಲಬುರ್ಗಿ ಜನ.

‘ಹ್ವಾದ್ ವರ್ಷನೂ ಭಾಳ ಮಳಿ ಆಗಿತ್ತು.ಬಸುರಿ ಬಾಣಂತ್ಯಾರು ಇದ್ರು. ಮಳೆ ಬಂದಾಗ ಮನೀನ ಮುಳುಗಿದ್ವು, ಮನ್ಯಾಗೀನ ಸಾಮಾನೆಲ್ಲ ನೀರಾಗ ಹರಕೊಂಡ ಹೋಗಿದ್ವು, ಇಲ್ಲೇ ಬಾಜೂಕಿನ ಬಸ್‌ಸ್ಟ್ಯಾಂಡು ಮತ್ತss ಚರ್ಚ್‌ಗೆ ಹೋಗಿ ಮಳಿ ನಿಲ್ಲು ಮಟ ಅಲ್ಲೇ ಇದ್ವಿ. ಹೊಟ್ಟಿಗೆ ಅನ್ನ ಸಹಿತ ಗತಿ ಇರಲಿಲ್ಲ’ ಎಂದು ಇಲ್ಲಿಗೆ ವಲಸೆ ಬಂದು ಗಾರೆ ಕೆಲಸ ಮಾಡುತ್ತಿರುವ ಸಾಬಮ್ಮಜ್ಜಿ ಹೇಳಿದರು.

‘ಮನ್ಯಾಗ ಕರೆಂಟ್‌, ನೀರು, ಸಂಡಾಸ್‌ ವ್ಯವಸ್ಥೆ ಏನೂ ಇಲ್ಲ. ಸಣ್ಣ ಸಣ್ಣ ಮಕ್ಕಳದಾವು. ಈಗ್ಲೂ ಭಾಳ ಮಳಿ ಬಂದ್ರ ಅದ ಗತಿ ಐತಿ’ಎಂದು ಸುಭದ್ರಮ್ಮ ಅಳಲು ತೋಡಿಕೊಂಡರು.

ADVERTISEMENT

ಈಜಿಪುರ, ವಿವೇಕ ನಗರ, ನೀಲಸಂಸದ್ರದ ಮೂಲಕ ಈ ಕಾಲುವೆ ಬೆಳ್ಳಂದೂರು ಕೆರೆಯನ್ನು ಸೇರುತ್ತದೆ. ಆ ಕಾಲುವೆ ಆಸುಪಾಸು ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ಇದೆ.

ಈಜಿಪುರದ ಬಡಾವಣೆಗಳಲ್ಲಿ ಹಾಯ್ದು ಹೋಗಿರುವ ಈ ಕಾಲುವೆಗೆ ನಾಲ್ಕು ವರ್ಷಗಳ ಹಿಂದೆ ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ, ಜೋರಾಗಿ ಮಳೆಯಾದಾಗಲೆಲ್ಲ ಕಾಲುವೆ ತುಂಬಿ ಚರಂಡಿ ನೀರೆಲ್ಲ ಮನೆ, ಶೌಚಾಲಯದೊಳಗೆ, ಬಡಾವಣೆಯ ಸುತ್ತಮುತ್ತನುಗ್ಗುತ್ತದೆ. ನಿವಾಸಿಗಳು ಮನೆಯ ಮುಂದೆ ಚಿಕ್ಕದಾಗಿ ತಡೆಗೋಡೆ ಕಟ್ಟಿಕೊಂಡಿದ್ದಾರೆ. ಕೆಲವು ಬಾರಿ ಅದನ್ನೂ ದಾಟಿ ನೀರು ಒಳ ನುಗ್ಗುತ್ತದೆ.

ಮಳೆ ಬಂದಾಗಲೆಲ್ಲ ಸಂಕಷ್ಟ ಇದ್ದಿದ್ದೆ: ರಾಜಕಾಲುವೆಗೆ ಈಜಿಪುರದ ಎಂಟನೇ ಅಡ್ಡರಸ್ತೆ, ಆರ್ಯ ರಸ್ತೆ ಮತ್ತು ಇಂದಿರಾ ಗಾಂಧಿ ಸ್ಲಂ ಮತ್ತುಸುತ್ತಮುತ್ತ ಮನೆಗಳ ಒಳಚರಂಡಿಗಳ ಸಂಪರ್ಕ ಕಲ್ಪಿಸಲಾಗಿದೆ.ಸಾಧಾರಣ ಮಳೆ ಬಂದಾಗಲೂ ಸಹ ರಾಜಕಾಲುವೆ, ಒಳಚರಂಡಿ ನೀರು ಉಕ್ಕಿ ಹೊರ ಚೆಲ್ಲುತ್ತದೆ. ತ್ಯಾಜ್ಯ ಸಹಿತ ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ.

ಇಲ್ಲಿನರಸ್ತೆಗಳೂ ಕಿರಿದಾಗಿವೆ. ನೀರು ಇಂಗಲು ಅಥವಾ ಹರಿದು ಮುಂದೆ ಸಾಗಲು ಜಾಗವೇ ಇಲ್ಲದಂತಾಗಿದೆ.ಪ್ರತಿ ಬಾರಿ ಜೋರಾಗಿ ಮಳೆ ಬಂದಾಗಲೆಲ್ಲ ಮನೆಗಳಲ್ಲಿ ಸೊಂಟದವರೆಗೂ ನೀರು ನಿಲ್ಲುತ್ತದೆ. ಶೇಖರಣೆಗೊಂಡ ಕೊಳಚೆ ವಸ್ತು, ನೀರನ್ನು ತೆರವುಗೊಳಿಸುವುದರಲ್ಲೇ ಹೈರಾಣಾಗುತ್ತಾರೆ ಇಲ್ಲಿನ ಜನ.

‘ಬಿಬಿಎಂಪಿಯವರು ಕೆಲವೊಮ್ಮೆ ಬಂದು ಇಲ್ಲಿನ ಸ್ಥಿತಿಗತಿ ನೋಡಿಕೊಂಡು ಹೋಗುತ್ತಾರೆ. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ.ಅವೈಜ್ಞಾನಿಕವಾಗಿ ರಸ್ತೆ, ಒಳಚರಂಡಿಯನ್ನು ನಿರ್ಮಿಸಿರುವುದೇ ಇಲ್ಲಿನ ಸಮಸ್ಯೆಗಳಿಗೆ ಕಾರಣ’ ಎಂದು ಈಜಿಪುರ ಎಂಟನೇ ಎ ಅಡ್ಡರಸ್ತೆಯ ನಿವಾಸಿಗಳು ದೂರಿದರು.

ಕೋರಮಂಗಲದ 80 ಅಡಿ ರಸ್ತೆಯ (ಶ್ರೀನಿವಾಗಿಲು ಮುಖ್ಯರಸ್ತೆ) ಸೋನಿ ವರ್ಲ್ಡ್‌ ಜಂಕ್ಷನ್‌ನಿಂದ ಕೋರಮಂಗಲ 1ನೇ ಬ್ಲಾಕ್‌ ಸಿಗ್ನಲ್‌ವರೆಗೆ ನಿಂತಿದ್ದ ಕೊಳಚೆ ನೀರು ಖಾಲಿಯಾಗಿತ್ತು. ಆದರೆ, ವಿವೇಕನಗರ ಬಸ್‌ ನಿಲ್ದಾಣ ಮುಂಭಾಗದ ಒಂದು ಬದಿ ರಸ್ತೆಯಲ್ಲಿ ಭಾರಿ ಗುಂಡಿಗಳು ಬಿದ್ದಿದ್ದರಿಂದ ಮಳೆ ನೀರು, ಕೊಚ್ಚೆಯಿಂದ ತುಂಬಿಕೊಂಡಿತ್ತು.ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗಿತ್ತು.

‘ಈಜಿಪುರದಲ್ಲಿ ಬಿಡಿಎ ಬಡಾವಣೆಗಳನ್ನು ನಿರ್ಮಿಸಿಲ್ಲ. ಆದರೆ, ಇಲ್ಲಿನ ಜನರೇ ಅಲ್ಲಲ್ಲಿ ಬೇಕಾಬಿಟ್ಟಿಯಾಗಿ ಅಕ್ರಮವಾಗಿ ಮನೆ ಕಟ್ಟಿಕೊಂಟಿದ್ದಾರೆ. ಅಲ್ಲಲ್ಲಿ ತಗ್ಗು ಪ್ರದೇಶಗಳು ಇರುವುದರಿಂದ ಮಳೆಯಾದಾಗಲೆಲ್ಲ ಕೆಲವೆಡೆ ಚರಂಡಿ ನೀರು ಬಡಾವಣೆಗೆ ನುಗ್ಗುತ್ತೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ವಾರ್ಡ್‌ ಸದಸ್ಯ ಟಿ.ರಾಮಚಂದ್ರ ಹೇಳಿದರು.

*
ಕಳೆದ ವರ್ಷ ಭಾರಿ ಮಳೆಯಾಗಿತ್ತು. ಸುತ್ತಮುತ್ತಲ ಮನೆಗಳಲ್ಲಿ ನೀರು ತುಂಬಿದ್ದರಿಂದ ಭಾರಿ ಸಂಕಷ್ಟ ಅನುಭವಿಸಿದ್ದೆವು.
-ಸುಮತಿ, ಈಜಿಪುರ ಚರ್ಚ್‌ಸ್ಟ್ರೀಟ್‌ ನಿವಾಸಿ

*
ಪ್ರತಿಸಲ ಜೋರಾಗಿ ಮಳಿ ಬಂದ್ರ, ಇಡೀ ಮನೀನೆ ಮುಳುಗ್ತದ. ಇರಾಕ ನಮ್ಗ ಜಾಗಾನೂ ಇಲ್ಲ. ಎಲ್ಲಿ ಹೋಗೂಣು? ಬಸ್‌ ಸ್ಟ್ಯಾಂಡ್‌, ಚರ್ಚ್‌ಗಳೇ ಗತಿ.
-ಸಾಬಮ್ಮಜ್ಜಿ

*

ಕಾಲುವೆಯಲ್ಲಿ ಹೂಳು, ಕಳೆಗಿಡ ಹಾಗೂ ತ್ಯಾಜ್ಯ ತುಂಬಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿದೆ. ದಂಡೆಯ ಮೇಲೆಯೇ ಜನ ಗುಡಿಸಲು ಕಟ್ಟಿಕೊಂಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.