ADVERTISEMENT

ಎಲ್ಲೆಲ್ಲೂ ಮೊಳಗಿದ ಜೈಶ್ರೀರಾಮ್‌ ಘೋಷಣೆ: ರಾಮೋತ್ಸವ ಸಂಭ್ರಮದಲ್ಲಿ ಮಿಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 16:26 IST
Last Updated 22 ಜನವರಿ 2024, 16:26 IST
ಅಯೋಧ್ಯೆಯಲ್ಲಿ ನಡೆದ ಬಾಲ ರಾಮನ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಬೆಂಗಳೂರಿನ ಶಂಕರ ಮಠದಲ್ಲಿ ದೊಡ್ಡ ಪರದೆಯ ಮೇಲೆ ಸಾರ್ವಜನಿಕರು ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಅಯೋಧ್ಯೆಯಲ್ಲಿ ನಡೆದ ಬಾಲ ರಾಮನ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಬೆಂಗಳೂರಿನ ಶಂಕರ ಮಠದಲ್ಲಿ ದೊಡ್ಡ ಪರದೆಯ ಮೇಲೆ ಸಾರ್ವಜನಿಕರು ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಅಯೋಧ್ಯೆಯಲ್ಲಿ‌ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿರುವ ಸಮಯದಲ್ಲಿ ನಗರದ ಬಹುತೇಕ ಪ್ರದೇಶಗಳಲ್ಲಿ ರಾಮಜಪ, ಜೈಶ್ರೀರಾಮ್‌ ಘೋಷಣೆಗಳು ಮೊಳಗಿದವು.

ವಾಹನಗಳ ಮೇಲೆ ಕೇಸರಿ ಬಾವುಟಗಳು ರಾರಾಜಿಸಿದವು. ಹೋಟೆಲ್‌, ಅಂಗಡಿಗಳಲ್ಲಿ ಮಾತ್ರವಲ್ಲದೇ, ಸಂಘ ಸಂಸ್ಥೆಗಳ ಸದಸ್ಯರು ರಸ್ತೆ ಬದಿಯಲ್ಲಿ ಪಾನಕ, ಮಜ್ಜಿಗೆ, ಕೇಸರಿಬಾತ್‌, ಸಿಹಿ ತಿಂಡಿಗಳನ್ನು ಹಂಚಿ, ‘ಜೈಶ್ರೀರಾಮ್‌’ ಕೂಗಿ ಸಂಭ್ರಮಿಸಿದರು. 

ಚಿಕ್ಕಪೇಟೆ, ಮಾಮೂಲ್‌ ಪೇಟೆ, ಎಸ್‌.ಪಿ. ರೋಡ್‌ ಸಹಿತ ಹಲವು ಕಡೆಗಳಲ್ಲಿ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌  ಮಾಡಿ, ರಸ್ತೆಗಳನ್ನು ಬಂಟಿಂಗ್ಸ್‌, ಬ್ಯಾನರ್‌ಗಳಿಂದ ಅಲಂಕರಿಸಲಾಗಿತ್ತು. ಶ್ರೀರಾಮನ ಕಟೌಟ್‌ ನಿಲ್ಲಿಸಲಾಗಿತ್ತು.

ADVERTISEMENT

ಬಹುತೇಕ ದೇಗುಲಗಳಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ ನಡೆದವು. ರಾಜಾಜಿನಗರದ ರಾಮಮಂದಿರ ದೇವಾಲಯದಲ್ಲಿ ಬೆಳಿಗ್ಗೆ 3ಕ್ಕೆ ರಾಮದೇವರಿಗೆ ಅಭಿಷೇಕ ಮಾಡಲಾಯಿತು. ಬಳಿಕ ವಿಶೇಷ ಅಲಂಕಾರ ಮಾಡಲಾಯಿತು. ಭಕ್ತರು ಬೆಳಿಗ್ಗೆ 6ರಿಂದಲೇ ದೇವರ ದರ್ಶನ ಪಡೆಯಲು ಆರಂಭಿಸಿದರು. ಮಹಾಮಂಗಳಾರತಿ, ರಾಮತಾರಕ‌ ಹೋಮ, ಪೂರ್ಣಾಹುತಿ ನಡೆದವು. ಸಾರ್ವಜನಿಕರ ಅನುಕೂಲಕ್ಕೆ ಎಲ್‌ಇಡಿ ವ್ಯವಸ್ಥೆ ಮಾಡಲಾಯಿತು. ಸಂಜೆ 6ಕ್ಕೆ ದೀಪಗಳನ್ನು ಬೆಳಗಿಸಲಾಯಿತು. ದೇವಾಲಯದಲ್ಲಿ ನಿರಂತರ ಭಜನೆ ಹಮ್ಮಿಕೊಳ್ಳಲಾಗಿತ್ತು.

ಗೋವಿಂದರಾಜನಗರ: ವಿಧಾನಸಭಾ ಕ್ಷೇತ್ರದ ವಿಜಯನಗರ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ ಮತ್ತು ದೇವರನಾಮ ಕೀರ್ತನೆ ಕಾರ್ಯಕ್ರಮ ನಡೆಯಿತು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿಸೂರ್ಯ, ಯುವ ನಾಯಕ ಅರುಣ್ ಸೋಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಂಕರ ಸೇವಾ ಸಮಿತಿ: ರಾಜಾಜಿನಗರನಗರದ  ಶಂಕರ ಸೇವಾ ಸಮಿತಿ ವತಿಯಿಂದ ಲೋಕಕಲ್ಯಾಣಕ್ಕಾಗಿ ರಾಮ ತಾರಕ ಹೋಮ ಆಯೋಜಿಸಲಾಗಿತ್ತು. ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್, ಕಾರ್ಯದರ್ಶಿ ರಾಮ್ರಸಾದ್, ವೇದ ಬ್ರಹ್ಮ ಅಮರನಾರಾಯಣ ಶರ್ಮ ರಾಮ ತಾರಕ ಹೋಮಕ್ಕೆ ಶುಭಾರಂಭ ನೀಡಿದರು. ಶ್ರೀರಾಮನ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

ಶಾಸಕ ಎಸ್‌. ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯ, ಶ್ರೀರಾಮಮಂದಿರ, ದಯಾನಂದನಗರ ಮತ್ತು ಶಿವನಗರ, ಬಸವೇಶ್ವರನಗರ, ರಾಜಾಜಿನಗರ ವಾರ್ಡ್‌ಗಳಲ್ಲಿ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಸಿಹಿ ವಿತರಿಸಲಾಯಿತು. ನಗರದ ಹಲವೆಡೆ ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. 

ನೇರ ಪ್ರಸಾರ: ಬಿಜೆಪಿ ಬೆಂಗಳೂರು ಮಹಾನಗರ ಘಟಕದಿಂದ ಬಾಣಸವಾಡಿಯ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ನಂತರ ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಕಾರ್ಯಕರ್ತರು ಭಾಗವಹಿಸಿದ್ದರು.

ಆಹಾರ ವಿತರಣೆ: ಭರವಸೆ ತಂಡವು ‘ಬಡವರಿಗೆ ಭರವಸೆಯ ಬುತ್ತಿ’ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಆಹಾರ ಹಂಚಿತು. ‘ಜೈ ಶ್ರೀರಾಮ’ ಎಂಬ ಹೆಸರಿನ ಊಟದ ಪೊಟ್ಟಣಗಳನ್ನು ರಸ್ತೆ ಬದಿಯಲ್ಲಿರುವ ನಿರ್ಗತಿಕರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಚರ್ಮ ರೋಗ ಪೀಡಿತರಿಗೆ ನೀಡಲಾಯಿತು.

ಜೌಗುಪಾಳ್ಯ ನಾಗರಿಕರ ಸೇವಾ ಸಮಿತಿ ವತಿಯಿಂದ ರಾಮ, ಸೀತಾ ಮತ್ತು ಲಕ್ಷ್ಮಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಾಜಿ ಮೇಯರ್‌ ಗೌತಮ್‌ ಪಾಲ್ಗೊಂಡಿದ್ದರು.

ಬಸವನಗುಡಿಯ ಕಾರಂಜಿ ಶ್ರೀ ರಾಮ ಸ್ವಾಮಿ ದೇವಸ್ಥಾನದಲ್ಲಿ ಹೋಮ, ಹವನ ವಿಶೇಷ ಪೂಜಾ ವಿಧಿ ವಿಧಾನವನ್ನು ನೆರವೇರಿಸಲಾ ಯಿತು. ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ವಿಶೇಷ ಪೂಜೆ ಸಲ್ಲಿಸಿದರು.

ಲಗ್ಗೆರೆ ಲಿಟಲ್ ಕಿಡ್ಸ್ ಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಮಕ್ಕಳು ರಾಮಜಪ ಮಾಡಿದರು. ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ ವತಿಯಿಂದ ಸಂಸ್ಥೆಯ ಆವರಣದಲ್ಲಿ ದೀಪ ಬೆಳಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜಯನಗರದ ವಿನಾಯಕ ದೇವಸ್ಥಾನದಲ್ಲಿ ರಾಮ ಆಂಜನೇಯ ಸಹಿತ ವಿವಿಧ ವೇಷಧಾರಿಗಳು ಜನರನ್ನು ಆಕರ್ಷಿಸಿದರು. –ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್
ಗೋವಿಂದರಾಜನಗರ ಕ್ಷೇತ್ರದ ವಿಜಯನಗರ ಮಾರುತಿ ಮಂದಿರದಲ್ಲಿ ನಡೆದ ವಿಶೇಷ ಪೂಜೆ ಮತ್ತು ದೇವರನಾಮ ಕೀರ್ತನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅವರು ರಾಮನ ವೇಷಧಾರಿಯಲ್ಲಿದ್ದ ಬಿಲ್ಲುಬಾಣವನ್ನು ತೆಗೆದುಕೊಂಡು ಜನರೆಡೆಗೆ ಗುರಿ ಹಿಡಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಂಸದ ತೇಜಸ್ವಿಸೂರ್ಯ ಅರುಣ್ ಸೋಮಣ್ಣ ಭಾಗವಹಿಸಿದ್ದರು.
ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ ವತಿಯಿಂದ ಸಂಸ್ಥೆಯ ಆವರಣದಲ್ಲಿ ದೀಪ ಬೆಳಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬಾಣಸವಾಡಿಯ ಆಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿದ್ದರು.
ನಗರದ ಅರಮನೆ ರಸ್ತೆಯಲ್ಲಿರುವ ಮಾರುತಿ ಭಗವಾನ್‌ ದೇವಾಲಯದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಶೇಷ ಪೂಜೆ ನಡೆಯಿತು.
ಶಾಸಕ ಎಸ್‌. ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ರಾಜಾಜಿನಗರದಲ್ಲಿ ಪ್ರಸಾದ ವಿತರಣೆ ನಡೆಯಿತು
ನಗರದ ಸಂಪಿಗೆ ರಸ್ತೆಯಲ್ಲಿ ಹಣತೆಗಳನ್ನು ಬೆಳಗಲಾಯಿತು –ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಕಾರ್ಯಕರ್ತರಿಂದ ಪೂಜೆ
ಅರಮನೆ ರಸ್ತೆಯಲ್ಲಿರುವ ಮಾರುತಿ ಭಗವಾನ್‌ ದೇವಾಲಯದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಶೇಷ ಪೂಜೆ ನಡೆಯಿತು. ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಸಿದ್ದರಾಮಯ್ಯ ಸರ್ಕಾರಕ್ಕೆ ಶಾಶ್ವತ ರಜೆ: ತೇಜಸ್ವಿ ಸೂರ್ಯ
’ಸಿದ್ದರಾಮಯ್ಯ ಅವರ ಸರ್ಕಾರ ಬಾಲರಾಮ ಪ್ರತಿಷ್ಠಾಪನೆ ದಿನದಂದು ಅರ್ಧ ದಿನ ರಜೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಜನರು ಇವರಿಗೆ ಶಾಶ್ವತವಾಗಿ ರಜೆ ಕೊಡುತ್ತಾರೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಬಿಜೆಪಿ ಮುಖಂಡ ಅರುಣ್‌ ಸೋಮಣ್ಣ ನೇತೃತ್ವದಲ್ಲಿ ಮಾರುತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ‘ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ನೇರ ಪ್ರಸಾರ’ ಹತ್ತು ಸಾವಿರ ದೀಪ ಬೆಳಗುವ ಕಾರ್ಯಕ್ರಮ ಹಾಗೂ ಭಕ್ತರಿಗೆ ಲಡ್ಡು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.