ADVERTISEMENT

ಭಾರತ-ಪಾಕ್‌ ವಿಭಜನೆ ವಿರೋಧಿಸಿ ಹೋರಾಟ ನಡೆಸಲಿಲ್ಲ ಏಕೆ: ರಾಮ ಮಾಧವ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 4:46 IST
Last Updated 24 ಸೆಪ್ಟೆಂಬರ್ 2022, 4:46 IST

ಬೆಂಗಳೂರು: ‘ಭಾರತ ಹಾಗೂ ಪಾಕಿಸ್ತಾನ ವಿಭಜನೆ ವಿರೋಧಿಸಿ ಇಡೀ ದೇಶ ಒಗ್ಗಟ್ಟಿನಿಂದ ಏಕೆ ಹೋರಾಟ ನಡೆಸಲಿಲ್ಲ’ ಎಂದು ಚಿಂತಕ ರಾಮ ಮಾಧವ್‌ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಮಂಥನ ಬೆಂಗಳೂರು ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

‘ನನ್ನ ‘ವಿಭಜಿತ ಸ್ವಾತಂತ್ರ್ಯ’ ಕೃತಿಯಲ್ಲಿ ಎರಡು ಭಾಗಗಳು ಇವೆ. 1905ರಲ್ಲಿ ಪೂರ್ವ ಹಾಗೂ ಪಶ್ಚಿಮ ಬಂಗಾಳದ ವಿಭಜನೆ ವೇಳೆ ಇಡೀ ದೇಶವೇ ಒಟ್ಟಾಗಿ ಹೋರಾಟ ನಡೆಸಿತ್ತು. ಅದೇ ಹಿಂದೂಗಳಿಗೆ ಹಿಂದೂಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನವಾಗಿ ಇಡೀ ದೇಶವನ್ನೇ ವಿಭಜಿಸಿದಾಗ ಏಕೆ ಅಂತಹ ಹೋರಾಟಗಳು ಮತ್ತೆ ನಡೆಯಲಿಲ್ಲ’ ಎಂದರು.

ADVERTISEMENT

‘ಈ ಪುಸ್ತಕವು ದೇಶದ ವಿಭಜನೆಯ ಕುರಿತು ಇದೆ. 1905, 1911 ಹಾಗೂ 1940 ಹಾಗೂ 1947ರಲ್ಲಿ ನಡೆದ ವಿಭಜನೆಯ ವಿಷಯಗಳ ಕುರಿತು ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ’ ಎಂದರು.

‘ಮಹಾತ್ಮ ಗಾಂಧಿ ಹಾಗೂ ಮಹಮ್ಮದ್ ಆಲಿ ಜಿನ್ನಾ ಇಬ್ಬರೂ ಗುಜರಾತ್‌ ಮೂಲದವರು. ದೇಶದ ವಿಭಜನೆಯಲ್ಲಿ ಈ ಇಬ್ಬರು ನಾಯಕರ ಪಾತ್ರವೇನು ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಜಿನ್ನಾ ಆರಂಭಿಕ ದಿನಗಳಲ್ಲಿ ದೇಶ ವಿಭಜನೆ, ಮುಸ್ಲಿಂ ಲೀಗ್‌ನ ಕಾರ್ಯತಂತ್ರ ವಿರೋಧಿಸಿದ್ದ. ಜಿನ್ನಾ ಕಾಂಗ್ರೆಸ್‌ ತೊರೆದ ಮೇಲೆ ಮುಸ್ಲಿಂ ಲೀಗ್‌ನ ರಾಜಕಾರಣದಲ್ಲಿ ಸಕ್ರಿಯನಾಗಿ ಪಾಕಿಸ್ತಾನದ ಉದಯಕ್ಕೆ ಕಾರಣನಾದ. ಪಾಕಿಸ್ತಾನದ ಪಿತಾಮಹ ಅನಿಸಿಕೊಂಡ’ ಎಂದರು.

‘ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧಿ ಅವರು ಆಗಮಿಸಿದ ಮೇಲೆ ಹಿಂದೂ ಹಾಗೂ ಮುಸ್ಲಿಮರನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವ ಅಭಿಲಾಷೆ ಹೊಂದಿದ್ದರು. ಒಗ್ಗಟ್ಟಿದ್ದರೆ ಸ್ವಾತಂತ್ರ್ಯ ತಾನಾಗಿಯೇ ಬರಲಿದೆ ಎಂದು ಮಹಾತ್ಮ ಗಾಂಧಿ ಅವರು ನಂಬಿದ್ದರು. ಅದು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

ಗಾಂಧೀಜಿ ಆರಂಭದಲ್ಲಿ ದೇಶ ವಿಭಜನೆ ವಿರೋಧಿಸಿದ್ದರು. ಆದರೆ, ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರ ಮಾಡಬೇಕೆಂದು ಜಿನ್ನಾ ಪಟ್ಟು ಹಿಡಿದಿದ್ದರು. ನಂತರ, ಈ ವಿಚಾರದಲ್ಲಿ ಮೃದು ಧೋರಣೆ ಅನುಸರಿಸಿದರು ಎಂದು ಹೇಳಿದರು.

‘ಮುಸ್ಲಿಂ ಲೀಗ್‌ ಪ್ರತ್ಯೇಕ ಕ್ಷೇತ್ರಗಳೂ ಸೇರಿ ಹಲವು ಬೇಡಿಕೆ ಮುಂದಿಟ್ಟಿತ್ತು. ಅದಕ್ಕೆ ಕಾಂಗ್ರೆಸ್‌ ಅಂದು ಒಪ್ಪಿತ್ತು. ಅದಾದ ಮೇಲೆ ಮುಸ್ಲಿಂ ಲೀಗ್‌ ಮತ್ತಷ್ಟು ಸದೃಢವಾಗಿ ಬೆಳೆಯಿತು. ವಿಭಜನೆಯು ತಪ್ಪು ತೀರ್ಮಾನಗಳಿಂದ ಆಗಿರುವ ಪ್ರಮಾದ. ಸಂಧಾನಕ್ಕೆ ಮುಂದಾಗಿದ್ದು ಹಿನ್ನಡೆ ಉಂಟಾಯಿತು. ಕೊನೆಗೆ ಮಹಾತ್ಮ ಗಾಂಧಿ ಅವರು ಸೋತರು, ಜಿನ್ನಾ ಯೋಜನೆಗಳು ಯಶಸ್ವಿಯಾದವು’ ಎಂದರು.

ಸಾಫ್ಟ್‌ವೇರ್‌ ಎಂಜಿನಿಯರ್‌ ಕೆ.ಎಸ್‌.ಕಿರಣ್‌ಕುಮಾರ್‌ ಸಂವಾದ ನಡೆಸಿಕೊಟ್ಟರು. ಇದೇ ವೇಳೆ ‘ವಿಭಜಿತ ಸ್ವಾತಂತ್ರ್ಯ’ ಕೃತಿಯನ್ನು ಸಚಿವ ಅಶ್ವತ್‌ ನಾರಾಯಣ ಬಿಡುಗಡೆ ಮಾಡಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.