ADVERTISEMENT

ಗಾಂಧಿ ರೂಪುಗೊಂಡ ಕ್ರಮ ಕಟ್ಟಿಕೊಡುವ ಕೃತಿ: ಎಂ.ಎಸ್‌.ಆಶಾದೇವಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:05 IST
Last Updated 11 ಅಕ್ಟೋಬರ್ 2021, 2:05 IST
ವಸಂತ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಎಸ್.ಆಶಾದೇವಿ (ಬಲತುದಿ) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಪತ್ರಕರ್ತ ಸತೀಶ್ ಚಪ್ಪರಿಕೆ, ಅಗ್ರಹಾರ ಕೃಷ್ಣಮೂರ್ತಿ ಹಾಗೂ ರಾಮಚಂದ್ರ ಗುಹಾ ಇದ್ದಾರೆ- ಪ್ರಜಾವಾಣಿ ಚಿತ್ರ
ವಸಂತ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಎಸ್.ಆಶಾದೇವಿ (ಬಲತುದಿ) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಪತ್ರಕರ್ತ ಸತೀಶ್ ಚಪ್ಪರಿಕೆ, ಅಗ್ರಹಾರ ಕೃಷ್ಣಮೂರ್ತಿ ಹಾಗೂ ರಾಮಚಂದ್ರ ಗುಹಾ ಇದ್ದಾರೆ- ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಹಾತ್ಮ ಗಾಂಧೀಜಿಯವರು ರೂಪುಗೊಂಡ ಕ್ರಮವನ್ನು ಸಾಧ್ಯವಾದಷ್ಟು ಪ್ರಾಯೋಗಿಕ ಹಾಗೂ ವಸ್ತುನಿಷ್ಠ ನೆಲೆಯಲ್ಲಿ ಕಟ್ಟಿಕೊಡುವ ಕೃತಿ ಇದು. ಈ ಕಾರ್ಯಕ್ಕೆ ಅಸಾಧಾರಣ ಸಂಯಮ ಬೇಕು. ಅದನ್ನು ರಾಮಚಂದ್ರ ಗುಹಾ ಅವರು ಸಾಧಿಸಿಕೊಂಡಂತಿದೆ’ ಎಂದು ವಿಮರ್ಶಕಿ ಎಂ.ಎಸ್‌.ಆಶಾದೇವಿ ಹೇಳಿದರು.

ಎಂ.ಸಿ.ಪ್ರಕಾಶ್‌ ಅವರು ಕನ್ನಡಕ್ಕೆ ಅನುವಾದಿಸಿರುವ ರಾಮಚಂದ್ರ ಗುಹಾ ಅವರ ‘ಗಾಂಧಿ: ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು 1914–1948’ ಎರಡು ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

‘ತೀರ್ಮಾನಗಳನ್ನು ಹೇಳದೆಯೇ ಗಾಂಧಿ ನಡೆದು ಬಂದ ಹಾದಿಯನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಅದನ್ನು ಗುರುತಿಸುವ ಕ್ರಮವೇ ಕರಾರುವಾಕ್ಕಾಗಿದೆ. ಗಾಂಧಿ ಮತ್ತು ಮಹಿಳೆ ಕುರಿತ ಸಂಕೀರ್ಣ ಸಂದರ್ಭವನ್ನು ತುಂಬಾ ಸೂಕ್ಷ್ಮವಾಗಿ ಪ್ರಸ್ತಾಪ ಮಾಡಲಾಗಿದೆ. ಮನುಷ್ಯರಾಗಿ ಗಾಂಧಿ ಪಡೆದ ವಿಕಾಸವನ್ನು ಕಟ್ಟಿಕೊಡಲಾಗಿದೆ’ ಎಂದರು.

ADVERTISEMENT

‘ಅತ್ಯಂತ ಬಿಕ್ಕಟ್ಟಿನ ಈ ಕಾಲದಲ್ಲಿ ಗಾಂಧಿಯವರನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬ ನಿರೂಪಣೆಯೂ ಪುಸ್ತಕದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಗಾಂಧಿ ಬಗ್ಗೆ ನಡೆದಿರುವಷ್ಟು ಪರ ಮತ್ತು ವಿರೋಧದ ಚರ್ಚೆಗಳು ಜಗತ್ತಿನ ಬೇರೆ ಯಾವ ವ್ಯಕ್ತಿಯ ಕುರಿತೂ ನಡೆದಿಲ್ಲ.ಗಾಂಧಿಯವರನ್ನು ಮಾದರಿ ಹಾಗೂ ಆದರ್ಶವಾಗಿ ನೋಡಿದಾಗ ಅಲ್ಲಿ ಸಾಕಷ್ಟು ತೊಡಕುಗಳಿದ್ದಂತೆ ಕಾಣುತ್ತವೆ. ಅವರನ್ನು ಜೀವನ ಕ್ರಮವನ್ನಾಗಿ ನೋಡಲು ಹೊರಟಾಗ ಅವರ ಜೊತೆಯಲ್ಲಿ ಆಗಬಹುದಾದ ಗೆಳೆತನ ಹಾಗೂ ಜಗಳ ಬಹಳ ಅರ್ಥಪೂರ್ಣವೆನಿಸುತ್ತದೆ’ ಎಂದೂ ತಿಳಿಸಿದರು.

ಲೇಖಕ ಅಗ್ರಹಾರ ಕೃಷ್ಣಮೂರ್ತಿ, ‘ಗಾಂಧಿಯ ದೃಷ್ಟಿ ಬಿದ್ದ ಬಳಿಕ ಒಣಗಿದ ಮರವೊಂದು ಚಿಗುತು ನಿಲ್ಲುತ್ತದೆ ಎಂಬ ಆಸಕ್ತಿಕರ ಕಥೆ ಈ ಪುಸ್ತಕದಲ್ಲಿದೆ. ಗಾಂಧಿ ಕುರಿತು ವ್ಯಂಗವಾಡಿದ ಕಾರಣಕ್ಕೆ ಹಾಲು ಮಾರುವವನ ಗಡಿಗೆಯಲ್ಲಿದ್ದ ತುಪ್ಪ ಹಾಳಾಗಿಬಿಡುತ್ತದೆ ಎಂಬ ಉಲ್ಲೇಖವಿದೆ. ಮನುಷ್ಯನೊಬ್ಬನ ಬದುಕಿನ ಕಾಲಘಟ್ಟದಲ್ಲೇ ಹುಟ್ಟಿದ ದಂತಕಥೆಗಳು ಚರಿತ್ರೆಯನ್ನಷ್ಟೇ ಬೆಂಬಲಿಸದೆ ಭವಿಷ್ಯವನ್ನು ಕಾಪಾಡುತ್ತವೆ’ ಎಂದರು.

ಇತಿಹಾಸಕಾರ ರಾಮಚಂದ್ರ ಗುಹಾ, ‘ಮಹಿಳೆಯರು ಹಾಗೂ ಪುರುಷರು ಬದಲಾದಾಗ ಮಾತ್ರ ಜಗತ್ತಿನಲ್ಲಿ ಲಿಂಗ ಸಮಾನತೆ ಅಸ್ತಿತ್ವಕ್ಕೆ ಬರಲು ಸಾಧ್ಯ. ಭಾರತಕ್ಕೆ ಗಾಂಧಿ ಹಾಗೂ ಅಂಬೇಡ್ಕರ್‌ ಇಬ್ಬರೂ ಬೇಕು. ಗಾಂಧೀಜಿ ಮೇಲ್ಜಾತಿಯ ಹಿಂದೂಗಳನ್ನು ಬದಲಿಸಲು ಪ್ರಯತ್ನಿಸಿದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.