ಬೆಗಳೂರು: ನಗರದ ರಾಮಯ್ಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ (ಎಂಎಸ್‌ಆರ್‌ಸಿಎಎಸ್‌ಸಿ) ಕಾಲೇಜಿಗೆ ‘ಸ್ವಾಯತ್ತತೆ‘ಯ ಮಾನ್ಯತೆ ದೊರೆತಿದೆ.
ರಾಮಯ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿಗೆ ಸ್ವಾಯತ್ತತೆಯ ಮಾನ್ಯತೆ ದೊರೆತಿರುವುದನ್ನು ಅನಾವರಣಗೊಳಿಸಲಾಯಿತು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಕಾಲೇಜು ಇದೀಗ ಸ್ವಾಯತ್ತತೆ ಪಡೆದು ಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಸ್ವತಂತ್ರವಾಗಿದೆ. ಮುಂದೆ ಕಾಲೇಜು ಪಠ್ಯಕ್ರಮ ರೂಪಿಸಿಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಎಸ್.ನಿರಂಜನ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಡಾ.ಲಿಂಗರಾಜ ಗಾಂಧಿ ಅವರು ಭಾಗವಹಿಸಿದ್ದರು.
ಪ್ರೊ.ಎನ್.ನಿಂರಜನ ಮಾತನಾಡಿ, ‘ರಾಮಯ್ಯ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಹಲವು ಕೋರ್ಸ್‌ಗಳಿವೆ. ಮೂಲಸೌಕರ್ಯ ಉತ್ತಮವಾಗಿದೆ. ಈ ಎಲ್ಲ ಮಾನದಂಡಗಳಿಂದಲೇ ಕಾಲೇಜಿಗೆ ಸ್ವಾಯತ್ತತೆ ಸಿಕ್ಕಿದೆ‘ ಎಂದು ಹೇಳಿದರು.
ಪ್ರೊ.ಲಿಂಗರಾಜ ಗಾಂಧಿ, ‘ಕಾಲೇಜಿಗೆ ಸ್ವಾಯತ್ತತೆ ಸಿಕ್ಕಿರುವುದು ಆಡಳಿತ ಮಂಡಳಿಗೆ ಬಹಳ ಸಂತಸ ತಂದಿದೆ. ಹೊಸ ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಮೂಲಕ ಕಾಲೇಜು ಮತ್ತಷ್ಟು ಅಭಿವೃದ್ಧಿ ಸಾಧಿಸಲಿ‘ ಎಂದು ಶುಭ ಹಾರೈಸಿದರು.
ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ‘ಕಾಲೇಜಿಗೆ ಸ್ವಾಯತ್ತತೆ ದೊರೆತಿರುವುದರಿಂದ, ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ‘ ಎಂದು ಹೇಳಿದರು.
‘ಸ್ವಾಯತ್ತತೆ ಸಿಕ್ಕಿದೆ ಎಂಬ ಕಾರಣಕ್ಕೆ ನಾವು ನಿಯಮಗಳನ್ನು ಬಿಟ್ಟು ಕಾಲೇಜು ನಡೆಸುವುದಿಲ್ಲ. ಇನ್ನಷ್ಟು ಜವಾಬ್ದಾರಿಯಿಂದ ಕಾಲೇಜು ನಡೆಸುತ್ತೇವೆ. ಕಾಲೇಜು ಬೆಳವಣಿಗೆ ಎಂದರೆ, ಅದು ನಮ್ಮೆಲ್ಲರ ಬೆಳವಣಿಗೆಯಾಗಿದೆ ‘ಎಂದರು.
ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ರಾಮಯ್ಯ ಕಾಲೇಜಿನ ನಿರ್ದೇಶಕರಾದ ಜಾನಕಿರಾಮ್, ಕೋದಂಡರಾಮ್, ಗೋಕುಲ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಬಿ.ಎಸ್.ರಾಮಪ್ರಸಾದ್, ಹಣಕಾಸು ಅಧಿಕಾರಿ ಜಿ.ರಾಮಚಂದ್ರ, ಪ್ರಾಂಶುಪಾಲರಾದ ಡಾ.ಜಿ.ವತ್ಸಲಾ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.