ಬೆಂಗಳೂರು: ‘ಉತ್ತಮ ವಿಜ್ಞಾನಿಯಾಗುವುದು ಹೇಗೆ? ಅರ್ಹತೆಗಳೇನು? ಆಯಸ್ಕಾಂತಗಳ ರಚನೆ ಹೇಗೆ?....’ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ವಿಜ್ಞಾನಿಗಳಿಗೆ ಇಂತಹ ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ವಿಜ್ಞಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಮುಕ್ತ ದಿನದ ಕಾರ್ಯಕ್ರಮದಲ್ಲಿ ಆಯ್ದ ಶಾಲೆಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನೆಯ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮಲ್ಲೇಶ್ವರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕೇಂದ್ರೀಯ ವಿದ್ಯಾಲಯ ಐಐಎಸ್ಸಿ, ಕೇಂದ್ರೀಯ ವಿದ್ಯಾಲಯ ಹೆಬ್ಬಾಳ ಮತ್ತು ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಪ್ರಯೋಗಾಲಯಗಳಿಗೆ ಭೇಟಿ ನೀಡಿ ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿ.ವಿ. ರಾಮನ್ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಿದರು.
ವಿವಿಧೆಡೆ ವಿಜ್ಞಾನ ದಿನ ಆಚರಣೆ: ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಪಿಇಎಸ್ ಕಾಲೇಜಿನ ವಿಜ್ಞಾನ ಮತ್ತು ಮಾನವಿಕ ವಿಭಾಗದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಪನ್ಯಾಸ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ.ಕೋಟೇಶ್ವರ ರಾವ್, ‘ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ. ರಾಮನ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಫೆಬ್ರುವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ. ಸಿ.ವಿ.ರಾಮನ್ ಅವರು ಆಧುನಿಕ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದರು’ ಎಂದು ಬಣ್ಣಿಸಿದರು.
ಡಿಆರ್‌ಡಿಒ ಹಿರಿಯ ವಿಜ್ಞಾನಿ ಪರಮ ಹಂಸ, ‘ಕಳೆದ ವರ್ಷ ಇದೇ ದಿನ ಸಿಂಧುನೇತ್ರ ಉಪಗ್ರಹ ಯಶಸ್ವಿ ಉಡಾವಣೆಯಾಗಿತ್ತು. ಬಾಹ್ಯಾಕಾಶದಲ್ಲಿ ಒಂದು ವರ್ಷ ಪೂರೈಸಿರುವ ಉಪಗ್ರಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು. ಎಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿ ತೇಜಸ್ ಅವರು ತಾವು ಅಭಿವೃದ್ಧಿಪಡಿಸಿರುವ ಮಿನಿ ಆಕ್ಸಿಜನ್ ಪ್ಲಾಂಟ್ ಬಗ್ಗೆ ವಿವರ ಹಂಚಿಕೊಂಡರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ರಾಧಾಕೃಷ್ಣನ್, ಪಿಇಎಸ್ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಎಸ್. ಶ್ರೀಧರ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ವಿ.ಕೃಷ್ಣ, ಕೋರಿ ಲ್ಯಾಬ್‌ನ ನಿರ್ದೇಶಕ ಡಾ.ನಾಗೇಂದ್ರರಾವ್, ವಿಜ್ಞಾನ ಮತ್ತು ಮಾನವಿಕ ವಿಭಾಗದ ಪ್ರೊ.ಅನಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.