ADVERTISEMENT

29ಕ್ಕೆ ‘ಭಾವರಾಮಾಯಣ ರಾಮಾವತರಣ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:35 IST
Last Updated 25 ಜೂನ್ 2024, 15:35 IST
ರಾಘವೇಶ್ವರ ಭಾರತೀ ಸ್ವಾಮೀಜಿ
ರಾಘವೇಶ್ವರ ಭಾರತೀ ಸ್ವಾಮೀಜಿ   

ಬೆಂಗಳೂರು: ಭಾರತೀ ಪ್ರಕಾಶನ ಮತ್ತು ಸಾವಣ್ಣ ಪ್ರಕಾಶನ ಜಂಟಿಯಾಗಿ ಇದೇ 29ರಂದು ಸಂಜೆ 5 ಗಂಟೆಗೆ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ (ಶ್ರೀಸಂಸ್ಥಾನ) ಅವರು ರಚಿಸಿದ ‘ಭಾವರಾಮಾಯಣ ರಾಮಾವತರಣ’ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ. 

ಇಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ‘ಸುದೀರ್ಘ ಅಧ್ಯಯನ ಮತ್ತು ವಿದ್ವತ್ತಿನಿಂದ ರಾಘವೇಶ್ವರ ಭಾರತೀ ಸ್ವಾಮೀಜಿ ಈ ಕೃತಿಯನ್ನು ರಚಿಸಿದ್ದು, ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆ ಹಿಡಿದಿದ್ದಾರೆ. ರಾಮಾಯಣದ ಹೊಸ ಹೊಳಹುಗಳನ್ನು ಪರಿಚಯಿಸಿದ್ದಾರೆ. ಮೂಲ ಕೃತಿಗೆ ಧಕ್ಕೆಯಾಗದಂತೆ ಬರೆದಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿದ ಈ ಕೃತಿ ಬಿಡುಗಡೆ ಮುನ್ನವೇ ಆರು ಮುದ್ರಣಗಳನ್ನು ಕಂಡಿದ್ದು, ಆರು ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ’ ಎಂದು ಹೇಳಿದರು.

‘ಕೃತಿ ಬಿಡುಗಡೆ ಸಮಾರಂಭದಲ್ಲಿ ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಹಾಗೂ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಹಾಗೂ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಅವರು ಉಪಸ್ಥಿತರಿರುತ್ತಾರೆ. ನಾಡಿನ ವಿವಿಧ ಕ್ಷೇತ್ರಗಳ 108ಕ್ಕೂ ಹೆಚ್ಚು ಪ್ರಮುಖರು ಏಕಕಾಲದಲ್ಲಿ ಕೃತಿ ಬಿಡುಗಡೆ ಮಾಡುತ್ತಾರೆ. ರಾಜ್ಯದ ವಿವಿಧೆಡೆ ಇರುವ ಮಠದ ಹತ್ತು ಮಂಡಲದಲ್ಲಿಯೂ ಅದೇ ಸಮಯದಲ್ಲಿ ಕೃತಿ ಬಿಡುಗಡೆ ಮಾಡಲಾಗುತ್ತದೆ. ಸಮಾರಂಭದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಜತೆಗೆ ಸಂವಾದವೂ ನಡೆಯಲಿದೆ’ ಎಂದು ತಿಳಿಸಿದರು. 

ADVERTISEMENT

‘ರಾಮಾಯಣದ ಮೂಲ ಭಾವ ಗ್ರಹಿಸಿ ಇದೇ ಮೊದಲ ಬಾರಿಗೆ ಕೃತಿಯನ್ನು ಹೊರತರಲಾಗಿದೆ. ವಿವಿಧ ಕಾಂಡಗಳ ಅನುಸಾರ ಸಂಪುಟ ರೂಪದಲ್ಲಿ ಕೃತಿ ಮುಂದಿನ ದಿನಗಳಲ್ಲಿ ಹೊರಬರಲಿದೆ. ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ‘ಜಗನ್ನಾಯಕನ ಜಾತಕ’ ಎಂಬ ಕೃತಿಯನ್ನು ಸದ್ಯ ಬರೆಯುತ್ತಿದ್ದಾರೆ’ ಎಂದು ಹೇಳಿದರು.

ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ‘ಬಿಡುಗಡೆ ಮುನ್ನವೇ ಕೃತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆನ್‌ಲೈನ್ ವೇದಿಕೆಯಲ್ಲಿ ಮಾರಾಟವಾಗುತ್ತಿದೆ. ಈ ಕೃತಿಯಲ್ಲಿ ಸ್ವಾಮೀಜಿ ಸಾರಿರುವ ಮೌಲ್ಯಗಳು ಜಾತಿ, ಧರ್ಮದ ಎಲ್ಲೆಯನ್ನು ಮೀರಿದೆ. ಪುಸ್ತಕ ಬಿಡುಗಡೆ ಸಮಾರಂಭದ ದಿನ ಶೇ 20 ರಷ್ಟು ರಿಯಾಯಿತಿ ದರದಲ್ಲಿ ಕೃತಿಯ ಪ್ರತಿಗಳನ್ನು ಮಾರಾಟ ಮಾಡಲಾಗುತ್ತದೆ’ ಎಂದು ಹೇಳಿದರು. 

ಲೇಖಕ ಜಗದೀಶ್ ಶರ್ಮಾ ಸಂಪ, ಮಠದ ಮಾಧ್ಯಮ ಸಂಯೋಜಕ ಉದಯಶಂಕರ ಭಟ್ ಮಿತ್ತೂರು, ವಿತ್ತಾಧಿಕಾರಿ ಜೆ.ಎಲ್.ಗಣೇಶ್, ರಾಮಾಶ್ರಮ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.