ADVERTISEMENT

ಸಿ.ಡಿ ಹಗರಣ: ಕಮಲ್‌ ಪಂತ್‌ ವಿರುದ್ಧದ ಎಫ್‌ಐಆರ್ ರದ್ದು

ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 22:20 IST
Last Updated 14 ಡಿಸೆಂಬರ್ 2021, 22:20 IST
ಕಮಲ್‌ ಪಂತ್‌
ಕಮಲ್‌ ಪಂತ್‌   

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಲೈಂಗಿಕ ಸಿ.ಡಿ ಹಗರಣದಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್, ಡಿಸಿಪಿ ಎಂ.ಎನ್‌.ಅನುಚೇತ್ ಹಾಗೂ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆ ಅಧಿಕಾರಿ ಬಿ.ಮಾರುತಿ ವಿರುದ್ಧ ತನಿಖೆ ನಡೆಸುವಂತೆ ನಗರದ 8ನೇ ಎಸಿಎಂಎಂ ನ್ಯಾಯಾಲಯ ನೀಡಿದ್ದ ಆದೇಶ ಮತ್ತು ಈ ಸಂಬಂಧದ ಎಫ್‌ಐಆರ್ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಈ ಕುರಿತಂತೆ ಕಮಲ್‌ ಪಂತ್‌, ಅನುಚೇತ್ ಮತ್ತು ಮಾರುತಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮಾನ್ಯ ಮಾಡಿದ್ದು, ‘ಆಯುಕ್ತರು ಮತ್ತು ಇತರರು ಎಫ್‌ಐಆರ್ ದಾಖಲಿಸದೇ ಕರ್ತವ್ಯ ಲೋಪ ಎಸಗಿರುತ್ತಾರೆ ಎಂದು ಅವರ ವಿರುದ್ಧ 166 (A) ಐಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲು ಆದೇಶಿಸಿದ್ದು ತಪ್ಪು’ ಎಂದು ಹೇಳಿದೆ.

ಆಯುಕ್ತರ ಪರ ವಾದ ಮಂಡಿಸಿದ ವಕೀಲ ಪಿ.ಪ್ರಸನ್ನಕುಮಾರ್, ‘ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ ತಕ್ಷಣ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಪ್ರಾಥಮಿಕ ವಿಚಾರಣೆ ಕೈಗೊಂಡು ಕಲ್ಲಹಳ್ಳಿಗೆ ನೋಟಿಸ್ ಜಾರಿ ಮಾಡಿದ್ದರು. ಪೊಲೀಸರ ಮುಂದೆ ಹಾಜರಾದ ದಿನೇಶ್‌ ಕಲ್ಲಳ್ಳಿ, ಸಿ.ಡಿಯನ್ನು ನನಗೆ ಯಾರು ಕೊಟ್ಟಿರುತ್ತಾರೊ ಅವರ ಬಗ್ಗೆಗಿನ ವಿವರಗಳು ಲಭ್ಯವಿಲ್ಲ ಹಾಗೂ ಹುಡುಗಿ ಉತ್ತರ ಕರ್ನಾಟಕದವಳು ಮತ್ತು ಆರ್.ಟಿ. ನಗರ ನಿವಾಸಿ ಎಂಬುದಷ್ಟೇ ಗೊತ್ತು’ ಎಂದು ತಿಳಿಸಿದ್ದಳು.

ADVERTISEMENT

‘ದಿನೇಶ್‌ ಕಲ್ಲಳ್ಳಿ 2021ರ ಮಾ. 7ರಂದು ಪುನಃ ಪೊಲೀಸರ ಮುಂದೆ ಹಾಜರಾಗಿ, ನನ್ನ ದೂರನ್ನು ಹಿಂಪಡೆಯುತ್ತೇನೆ ಎಂದು ತಿಳಿಸಿರುತ್ತಾರೆ. 2021ರ ಮಾರ್ಚ್‌ 11ರಂದು ಆಯುಕ್ತ ಕಮಲ್ ಪಂತ್ ವಿಶೇಷ ತನಿಖಾ ತಂಡ ರಚಿಸಲು ಆದೇಶಿಸಿದ್ದು, ವಿಚಾರಣೆ ಮುಂದುವರೆದಿತ್ತು. ಆದರೆ, ಅದೇ ಕಾಲಕ್ಕೆ 2021ರ ಮಾರ್ಚ್‌26ರಂದು ಸಂತ್ರಸ್ತ ಮಹಿಳೆ ತನ್ನ ವಕೀಲರ ಮುಖಾಂತರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕೂಡಲೇ ರಮೇಶ್ ಜಾರಕಿಹೊಳಿ ವಿರುದ್ಧ ಭಾರತೀಯ ದಂಡ ಸಂಹಿತೆ 376 ಸಿ (ಸಾರ್ವಜನಿಕ ಸೇವಕ ನಡೆಸುವ ಅತ್ಯಾಚಾರ) ಅಡಿ ಎಫ್‌ಐಆರ್ ದಾಖಲಿಸಿದರು. ನಂತರ ತನಿಖೆಯನ್ನು ಮಹಿಳಾ ಎಸಿಪಿ ಎಂ.ಸಿ.ಕವಿತಾ ಅವರಿಗೆ ವಹಿಸಲಾಗಿದ್ದು ಅವರು ತನಿಖೆಯನ್ನು ಪೂರ್ಣಗೊಳಿಸಿರುತ್ತಾರೆ’ ಎಂದು ಪ್ರಸನ್ನಕುಮಾರ್ ವಿವರಿಸಿದರು.

‘ಏತನ್ಮಧ್ಯೆ ವಕೀಲೆ ಗೀತಾ ಮಿಶ್ರಾ ದಾಖಲಿಸಿದ ಪಿಐಎಲ್‌ನಲ್ಲಿ ವಿಭಾಗೀಯ ನ್ಯಾಯಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ‌ ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಬಾರದು ಎಂದು ಆದೇಶ ಮಾಡಿರುತ್ತದೆ. ಆದರೆ, ಈ ಎಲ್ಲಾ ಸಂಗತಿಗಳನ್ನುದೂರುದಾರರು 8ನೇ ಎಸಿಎಂಎಂ ನ್ಯಾಯಾಲಯದ ಗಮನಕ್ಕೆ ತಾರದ ಕಾರಣ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಆದ್ದರಿಂದ, ಎಫ್‌ಐಆರ್ ರದ್ದುಗೊಳಿಸಿ ವಿಚಾರಣೆಯ ಆದೇಶ ವಜಾಮಾಡಬೇಕು’ ಎಂದು ಕೋರಿದರು. ವಾದವನ್ನು ಮನ್ನಿಸಿದ ಪೀಠ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.