ಬೆಂಗಳೂರು: ‘ನಗರದ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಆರನೇ ಆರೋಪಿ ಫೈಸಲ್ ಎಂಬಾತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ’ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕೆ ವ್ಯಕ್ತಪಡಿಸಿದೆ.
ಇತ್ತೀಚೆಗೆ ಕೋರ್ಟ್ ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳು ಈ ಅಂಶ ಉಲ್ಲೇಖಿಸಿದ್ದು, ಪ್ರಕರಣದಲ್ಲಿ ಪಾಕಿಸ್ತಾನದ ನಂಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ಮಾರ್ಚ್ 1ರಂದು ಕೆಫೆಗೆ ಬಂದಿದ್ದ ಶಂಕಿತನೊಬ್ಬ ಬ್ಯಾಗ್‌ನಲ್ಲಿ ತಂದಿದ್ದ ಕಚ್ಚಾ ಬಾಂಬ್ ಅನ್ನು ಕೆಫೆಯಲ್ಲಿ ಇಟ್ಟು ಪರಾರಿ ಆಗಿದ್ದ. ಗ್ರಾಹಕರು ಗಾಯಗೊಂಡಿದ್ದರು.
ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಪಶ್ಚಿಮ ಬಂಗಾಳದಲ್ಲಿ ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜೀದ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ಬಂಧಿಸಿದ್ದರು. ಇಬ್ಬರೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರು. ಶಂಕಿತರ ವಿಚಾರಣೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಾಗಿದ್ದವು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಮುಸಾವೀರ್ ಹುಸೇನ್ ಶಾಜೀದ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ವಿರುದ್ಧ ನಗರದ ರಾಷ್ಟ್ರೀಯ ತನಿಖಾ ದಳದ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಎರಡು ಹಂತದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಇಬ್ಬರು ಶಂಕಿತರ ಜತೆಗೆ ಫೈಸಲ್ ನಂಟು ಹೊಂದಿದ್ದ ಎನ್ನಲಾಗಿದೆ.
‘ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಯಾವುದಾದರೂ ಸ್ಥಳದಲ್ಲಿ ಸ್ಫೋಟ ನಡೆಸಲು ಶಂಕಿತರ ತಂಡ ಸಂಚು ರೂಪಿಸಿತ್ತು. ಸ್ಪೋಟಕ್ಕೆ ಆನ್‌ಲೈನ್ ಹ್ಯಾಂಡ್ಲರ್ ಮೂಲಕ ಸೂಚನೆ ರವಾನೆ ಆಗಿತ್ತು. ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಡೆದ ದಿನವೇ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು.
ಅದಕ್ಕಾಗಿಯೇ ಚೆನ್ನೈನಲ್ಲಿ ಬಾಡಿಗೆ ಮನೆ ಪಡೆದು ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದರು. ಚೆನ್ನೈನಿಂದ ಮುಸಾವೀರ್ ಹುಸೇನ್ ಶಾಜೀದ್ ನಗರಕ್ಕೆ ಬಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಐಇಡಿ ಇಟ್ಟು ಪರಾರಿ ಆಗಿದ್ದ. ಅದು ಸ್ಫೋಟಗೊಂಡಿರಲಿಲ್ಲ. ಅದಾದ ಮೇಲೆ ಶಂಕಿತರು ಮತ್ತೊಂದು ಸ್ಥಳದಲ್ಲಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು. ಶಾಜೀದ್‌ನನ್ನು ಫೆಬ್ರುವರಿ ಕೊನೆ ವಾರದಲ್ಲಿ ಬೆಂಗಳೂರಿಗೆ ಕಳುಹಿಸಿ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಇರಿಸಿದ್ದರು. ಈ ಪ್ರಕರಣದಲ್ಲಿ ಫೈಸಲ್ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಆತನಿರುವ ಸ್ಥಳವನ್ನೂ ಪತ್ತೆ ಹಚ್ಚಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.