ADVERTISEMENT

ಬೆಂಗಳೂರು | ಬಿರು ಬೇಸಿಗೆಯಲ್ಲೂ ರಾಮೋಹಳ್ಳಿ ಕೆರೆಯಲ್ಲಿ ಜಲ ವೈಭವ

ಯುದ್ಧ ಭೂಮಿ ಹೋರಾಟ ಸೇನೆಯ ಹೇಮಂತರಾಜ್ ಪರಿಶ್ರಮ

ಚಿಕ್ಕ ರಾಮು
Published 11 ಮೇ 2024, 0:30 IST
Last Updated 11 ಮೇ 2024, 0:30 IST
<div class="paragraphs"><p>ಕೆರೆಯ ದಡದ ಮರಗಳಲ್ಲಿ ಇರುವ ಪಕ್ಷಿಗಳು</p></div>

ಕೆರೆಯ ದಡದ ಮರಗಳಲ್ಲಿ ಇರುವ ಪಕ್ಷಿಗಳು

   

ರಾಜರಾಜೇಶ್ವರಿ ನಗರ: ಎರಡು ವರ್ಷಗಳ ಹಿಂದೆ ಹೂಳು ತುಂಬಿಕೊಂಡು, ಬರಿದಾಗಿದ್ದ ರಾಮೋಹಳ್ಳಿಯ ಕೆರೆಯಲ್ಲೀಗ ಬಿರು ಬೇಸಿಗೆಯಲ್ಲೂ ಜಲ ವೈಭವ. ಕೆರೆಯ ಸುತ್ತಾ ಪಕ್ಷಿಗಳ ಕಲರವ...

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿರುವ ರಾಮೋಹಳ್ಳಿ ಕೆರೆ 65 ಎಕರೆ ವಿಸ್ತೀರ್ಣವಿದೆ. ಎರಡು ವರ್ಷಗಳ ಹಿಂದೆ ಈ ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. ಕುರುಚಲು ಗಿಡಗಳು ಬೆಳೆದಿದ್ದವು. ಮಳೆ ಬಂದಾಗ ಅಲ್ಲಲ್ಲಿ ಇದ್ದ ಗುಂಡಿಗಳಲ್ಲಿ ಮಾತ್ರ ನೀರು ನಿಲ್ಲುತ್ತಿತ್ತು. ಅದೂ ಎರಡು–ಮೂರು ತಿಂಗಳಲ್ಲಿ ಬತ್ತಿ ಹೋಗುತ್ತಿತ್ತು.

ADVERTISEMENT

ಈ ಕೆರೆಗೆ, ಪುನುಗುಮಾರನಹಳ್ಳಿಯ ರಾಮಪ್ಪನ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರಾಜಕಾಲುವೆಗಳ ಮೂಲಕ ಮಳೆ ನೀರು ಹರಿದು ಬರುತ್ತಿತ್ತು. ರಾಜಕಾಲುವೆಗಳು ಒತ್ತುವರಿಯಾಗಿದ್ದರಿಂದ, ಮೇಲ್ಭಾಗದ ಕೆರೆ ತುಂಬಿ ಕೋಡಿ ಹರಿದರೂ ಈ ಕೆರೆಗೆ ನೀರು ತಲುಪುತ್ತಿರಲಿಲ್ಲ.

ರಾಮೋಹಳ್ಳಿ ಕೆರೆಯ ಸ್ಥಿತಿಯನ್ನು ಗಮನಿಸಿದ ‘ಯುದ್ಧ ಭೂಮಿ ಹೋರಾಟ ಸೇನೆ’ಯ ರಾಜ್ಯ ಘಟಕದ ಅಧ್ಯಕ್ಷ ಹೇಮಂತರಾಜ್, ಕೆರೆಗೆ ಮಳೆ ನೀರು ಹರಿಯದಿರಲು ಕಾರಣವೇನೆಂದು ಗುರುತಿಸಿದರು. ‘ಕೆರೆ ಪುನಶ್ಚೇತನಗೊಳಿಸಿ ನೀರು ತುಂಬುವಂತೆ ಮಾಡಬೇಕು’ ಎಂದು ಸಂಕಲ್ಪ ಮಾಡಿದರು. ಈ ಭಾಗದ ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿ, ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕೆರೆಯ ಸ್ಥಿತಿ–ಗತಿ ವಿವರಿಸಿ, ಪುನಶ್ಚೇತನ ಕಾರ್ಯಕ್ಕೆ ಅನುಮತಿ ಪಡೆದರು.‌

ಸ್ವಂತ ಹಣ ವ್ಯಯಿಸಿ, 25ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳು, 40 ಟ್ರ್ಯಾಕ್ಟರ್‌ಗಳನ್ನು ಬಳಸಿ ಹೂಳು ಎತ್ತಿಸಿದರು. ಕುರುಚಲು ಗಿಡಗಳನ್ನು ತೆಗೆಸಿದರು. ಮಳೆ ನೀರು ಹರಿಯುವ ರಾಜಕಾಲುವೆಗಳನ್ನೂ ಸ್ವಚ್ಚಗೊಳಿಸಿದರು. ಆ ವರ್ಷ (2022) ಉತ್ತಮ ಮಳೆಯಾಯಿತು. ರಾಜಕಾಲುವೆಗಳು ಸ್ವಚ್ಛವಾದ ಪರಿಣಾಮ ಮೇಲ್ಭಾಗದ ಕೆರೆ ನೀರು ಹಾಗೂ ಮಳೆ ನೀರು ಸರಾಗವಾಗಿ ರಾಮೋಹಳ್ಳಿ ಕೆರೆ ಸೇರಿತು. 21 ವರ್ಷಗಳ ನಂತರ ರಾಮೋಹಳ್ಳಿ ಕೆರೆ ತುಂಬಿ ಕೋಡಿ ಹರಿಯಿತು. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಯಿತು. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಯಿತು. ಕೆರೆ ಸುತ್ತಲಿನ ಪರಿಸರವೂ ಹಸಿರಾಯಿತು.  ಈಗ ಮುಂಜಾನೆ– ಸಂಜೆ ಪಕ್ಷಿಗಳ ಕಲರವ ಕೇಳಿಸುತ್ತಿದೆ.  

‘ಕೆರೆಯ ಸ್ಥಿತಿ ನೋಡಿ ಬೇಸರವಾಗಿತ್ತು. ಪ್ರಾಣಿ–ಪಕ್ಷಿಗಳು ನೀರಿಲ್ಲದೇ ಪರದಾಡಿದ್ದನ್ನು ನೋಡಿ ಸಂಕಟವಾಗಿತ್ತು. ಆಗಲೇ ಕೆರೆ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಅಧಿಕಾರಿಗಳಿಂದ ಅನುಮತಿ ಕೇಳಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು ಉಪವಿಭಾಗಾಧಿಕಾರಿ ಶಿವಣ್ಣ ಅವರು ಕೆರೆ ಅಭಿವೃದ್ಧಿ, ರಾಜಕಾಲುವೆ ಸ್ವಚ್ಛಗೊಳಿಸಲು ಅನುಮತಿ ನೀಡಿದರು. ಜೊತೆಗೆ ಅವರೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಅಧಿಕಾರಿಗಳ ನೇತೃತ್ವದಲ್ಲೇ ಒತ್ತುವರಿ ತೆರವುಗೊಳಿಸಲಾಯಿತು. ಕೆರೆ ಸ್ವಚ್ಛವಾಗಿ, ನೀರು ತುಂಬಿತು. ಈ ಬೇಸಿಗೆಯಲ್ಲೂ ಕೆರೆಯಲ್ಲಿ ನೀರಿದೆ. ಪಶು–ಪಕ್ಷಿಗಳ ಬಾಯಾರಿಕೆ ನೀಗಿಸುತ್ತಿದೆ’ ಎಂದು ಹೇಳಿದರು ಹೇಮಂತರಾಜ್.

‘ಕೆರೆ ತುಂಬಿ ಎರಡು ವರ್ಷಗಳಾದರೂ, ಈಗಲೂ ಕೆರೆಯಲ್ಲಿ ನೀರಿದೆ. ಸುತ್ತಲಿನ ಕೊಳವೆಬಾವಿಗಳಲ್ಲೂ ನೀರು ಸಿಗುತ್ತಿದೆ. ಆಗ ನೀರಿನ ಸಮಸ್ಯೆ ಇತ್ತು. ಈಗ ಇಲ್ಲ’ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಾರೆ.

ರಾಮೋಹಳ್ಳಿ ಕೆರೆಯಲ್ಲಿ ನೀರು ಶೇಖರಣೆಯಾಗಿ ನೀರು ಕೋಳಿಗಳು ಆಟದಲ್ಲಿ ತೊಡಗಿರುವುದು.

ನೀರು ಶೇಖರಣೆಯ ನೋಟ

ರಾಮೋ ಹಳ್ಳಿ ಕೆರೆಯಲ್ಲಿ ಜೆಸಿಬಿ ಮೂಲಕ ಕೆರೆ ಹೂಳು ಮತ್ತು ಗಿಡ ಗಂಟೆಗಳನ್ನು ತೆಗೆಯುತ್ತಿರುವುದು

ಕೆರೆ ಅಭಿವೃದ್ಧಿಯ ವೇಳೆ ಹಲವು ಅಡೆತಡೆಗಳು ಎದುರಾದರೂ ಹೇಮಂತರಾಜ್ ಅವರು ಯಾವುದಕ್ಕೂ ಅಂಜದೇ ಕೆರೆ  ಪುನಶ್ಚೇತನಗೊಳಿಸಿ ನೀರು ತುಂಬುವಂತೆ ಮಾಡಿದ್ದಾರೆ

-ಆರ್. ಪಿ. ಪ್ರಕಾಶ್ ರಾಮೋಹಳ್ಳಿ

ರಾಮಪ್ಪನ ಕೆರೆ ಕೋಡಿಬಿದ್ದಾಗ ರಾಜಕಾಲುವೆ ಮೂಲಕ ನೀರು ಹರಿದು ರಾಮೋಹಳ್ಳಿ ಕೆರೆ ಸೇರುತ್ತಿರಲಿಲ್ಲ. ಈಗ ಒತ್ತುವರಿ ತೆರವುಗೊಳಿಸಿದ್ದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗಿದೆ

-ವಿ.ವೇಣುಗೋಪಾಲ್ ಗ್ರಾ.ಪಂ ಅಧ್ಯಕ್ಷ ರಾಮೋಹಳ್ಳಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.