ADVERTISEMENT

ಅತ್ಯಾಚಾರ ಎಸಗಿ ಪರಾರಿ: ದುಬೈನಲ್ಲಿ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 18:39 IST
Last Updated 8 ಡಿಸೆಂಬರ್ 2023, 18:39 IST
ಮಿದುನ್ ಚಂದ್ರನ್
ಮಿದುನ್ ಚಂದ್ರನ್   

ಬೆಂಗಳೂರು: ಸಹೋದ್ಯೋಗಿ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಮಿದುನ್ ವಿ. ಚಂದ್ರನ್‌ ಅವರನ್ನು ದುಬೈನಲ್ಲಿ ಬಂಧಿಸಿ ನಗರಕ್ಕೆ ಶುಕ್ರವಾರ ಕರೆತರಲಾಗಿದೆ.

‘ಮಹದೇವಪುರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ದುಬೈಗೆ ಹೋಗಿ ಮಿದುನ್ ಚಂದ್ರನ್‌ನನ್ನು ಸೆರೆ ಹಿಡಿದಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕಂಪನಿಯೊಂದರ ಉದ್ಯೋಗಿ 30 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಮಿದುನ್, ಮದುವೆಯಾಗುವುದಾಗಿ ಹೇಳಿ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಹಣವನ್ನೂ ಪಡೆದುಕೊಂಡಿದ್ದ. ಕೆಲ ತಿಂಗಳ ನಂತರ ಮದುವೆಯಾಗಲು ನಿರಾಕರಿಸಿದ್ದ. ಮಧ್ಯ ಪ್ರವೇಶಿಸಿದ್ದ ಆರೋಪಿ ತಾಯಿ, ಮದುವೆ ಮಾಡಿಸುವುದಾಗಿ ಹೇಳಿದ್ದರು. ನಂತರ, ತಾಯಿ–ಮಗ ಇಬ್ಬರೂ ಯುವತಿಗೆ ಕಿರುಕುಳ ನೀಡಲಾರಂಭಿಸಿದ್ದರು. ನೊಂದ ಯುವತಿ, ದೂರು ನೀಡಿದ್ದರು. ಅತ್ಯಾಚಾರ, ನಂಬಿಕೆ ದ್ರೋಹ ಹಾಗೂ ಹಲ್ಲೆ ಆರೋಪದಡಿ ಮಿದುನ್ ಹಾಗೂ ತಾಯಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ADVERTISEMENT

‘2020ರಲ್ಲಿಯೇ ಮಿದುನ್‌ನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಈತ, ದೇಶ ಬಿಟ್ಟು ದುಬೈಗೆ ಹೋಗಿದ್ದ. ಅಲ್ಲಿಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತನ್ನ ಸುಳಿವು ಸಿಗದಂತೆ ಪದೇ ಪದೇ ವಾಸಸ್ಥಳ ಬದಲಿಸುತ್ತಿದ್ದ.’

‘ಪ್ರಕರಣದ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಷರತ್ತು ಬದ್ಧ ಜಾಮೀನು ಪಡೆದಿದ್ದ ಆರೋಪಿ, ಒಂದು ಬಾರಿಯೂ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಆರೋಪಿ ದುಬೈನಲ್ಲಿರುವ ಬಗ್ಗೆ ಮಾಹಿತಿ ತಿಳಿದಿದ್ದ ಸಂತ್ರಸ್ತ ಯುವತಿ, ನ್ಯಾಯಾಲಯದ ಗಮನಕ್ಕೆ ತಂದಿದ್ದರು. ನ್ಯಾಯಾಧೀಶರು, ಆರೋಪಿ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ಸಿಬಿಐ, ಇಂಟರ್‌ಪೋಲ್ ಸಹಾಯ: ‘ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಸಿಬಿಐ ಅಧಿಕಾರಿಗಳ ಸಹಾಯದಿಂದ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದರು. ಇಂಟರ್‌ಪೋಲ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು’ ಎಂದು ತಿಳಿಸಿದರು.

ವಶಕ್ಕೆ ಪಡೆದಿದ್ದ ದುಬೈ ಪೊಲೀಸರು: ‘ಆರೋಪಿ ಮಿದುನ್ ದಾಖಲೆ ನವೀಕರಣಕ್ಕೆಂದು ದುಬೈನಲ್ಲಿರುವ ಕಚೇರಿಯೊಂದಕ್ಕೆ ಹೋಗಿದ್ದ. ರೆಡ್ ಕಾರ್ನರ್ ನೋಟಿಸ್‌ ಇರುವುದನ್ನು ಗಮನಿಸಿದ್ದ ಅಲ್ಲಿಯ ಪೊಲೀಸರು, ಮಿದುನ್‌ನನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಡಿಸಿಪಿ ಸಾಹಿಲ್ ಬಾಗ್ಲಾ, ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು ಹಾಗೂ ನಹೀಂ ನೇತೃತ್ವದ ತಂಡ ಇತ್ತೀಚೆಗೆ ದುಬೈಗೆ ಹೋಗಿತ್ತು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.