ಬೆಂಗಳೂರು: ನಾಗದೋಷವಿದೆ ಎಂದು ಬಾಲಕಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ್ದ ಅಪರಾಧಿ ಮಂಜುನಾಥ್ ರಾವ್ ಎಂಬಾತನಿಗೆ ಎಫ್‌ಟಿಎಸ್‌ಸಿ 3ನೇ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿ ಮೆಡಿಕಲ್ ಗ್ಯಾಸ್ ಸಿಲಿಂಡರ್ ವ್ಯಾಪಾರ ನಡೆಸುತ್ತಿದ್ದ. ಅಂಗಡಿಯಲ್ಲಿ ದೇವರ ಫೋಟೊ ಇಟ್ಟುಕೊಂಡು ಅಂಗಡಿಗೆ ಬಂದ ಮಹಿಳೆಯರು ಹಾಗೂ ಬಾಲಕಿಯರಿಗೆ ಪ್ರಸಾದ ನೀಡಿ ನಾಗದೋಷವಿದೆ ಎಂದು ಹೇಳುತ್ತಿದ್ದ. ಹೀಗೆ ಬಂದ ಬಾಲಕಿಗೆ 2021ರ ಜುಲೈನಲ್ಲಿ ಅತ್ಯಾಚಾರ ಎಸಗಿದ್ದ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಭಾರತೀಯ ದಂಡ ಸಂಹಿತೆಯ ಕಲಂ 376 ಅಡಿ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ, ₹ 10 ಸಾವಿರ ದಂಡ, ಈ ಮೊತ್ತ ಪಾವತಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ 1 ವರ್ಷ ಶಿಕ್ಷೆ, ಕಲಂ 506 ಅಡಿ 2 ವರ್ಷಗಳ ಕಠಿಣ ಶಿಕ್ಷೆ, ₹ 5 ಸಾವಿರ ದಂಡ, ತಪ್ಪಿದಲ್ಲಿ 1 ತಿಂಗಳು ಹೆಚ್ಚುವರಿ ಶಿಕ್ಷೆ ಹಾಗೂ ಪೋಕ್ಸೊ ಅಡಿ ಜೀವಾವಧಿ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ಆದೇಶಿಸಿದ್ದಾರೆ.
₹ 4 ಲಕ್ಷ ಪರಿಹಾರ ಹಾಗೂ ಆರೋಪಿಗೆ ವಿಧಿಸಿದ್ದ ದಂಡದ ಮೊತ್ತದಲ್ಲಿ ₹ 20 ಸಾವಿರವನ್ನು ನೊಂದ ಬಾಲಕಿಗೆ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.