ADVERTISEMENT

ವಿಕಾಸಸೌಧದ ಕಚೇರಿ, ಸರ್ಕಾರಿ ಕಾರಲ್ಲೂ ಮುನಿರತ್ನರಿಂದ ಅತ್ಯಾಚಾರ: ಸಂತ್ರಸ್ತೆ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 18:42 IST
Last Updated 27 ಸೆಪ್ಟೆಂಬರ್ 2024, 18:42 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ‘ಮುನಿರತ್ನ ಅವರು ನನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಲ್ಲದೇ, ಐಎಎಸ್‌ ಅಧಿಕಾರಿಯೊಬ್ಬರ ಪತಿ ಐಎಫ್‌ಎಸ್‌ ಅಧಿಕಾರಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಯನ್ನು ಹನಿಟ್ರ್ಯಾಪ್‌ ಮಾಡಲು ಮತ್ತು ಗಾಂಜಾ ಪ್ರಕರಣದಲ್ಲಿ ಸಿಲುಕಿಸಲು ನನ್ನನ್ನು ಬಳಸಿಕೊಂಡಿದ್ದರು’ ಎಂದು ಕಗ್ಗಲೀಪುರ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆ ನ್ಯಾಯಾಧೀಶರ ಎದುರು ನೀಡಿದ್ದ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸಂತ್ರಸ್ತೆಯು ಸೆಪ್ಟೆಂಬರ್‌ 19ರಂದು ನೆಲಮಂಗಲದ ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ಎದುರು ಹಾಜರಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದರು. ಸಂತ್ರಸ್ತ ಮಹಿಳೆಯ ಹೇಳಿಕೆಯ ದೃಢೀಕೃತ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ವಿಕಾಸಸೌಧದ ಸಚಿವರ ಕಚೇರಿ, ಸರ್ಕಾರಿ ಕಾರು ಮತ್ತು ಗೋದಾಮಿನಲ್ಲಿ ಮುನಿರತ್ನ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರು ಎಂಬ ಆರೋಪವನ್ನು ಸಂತ್ರಸ್ತೆ  ಮಾಡಿದ್ದಾರೆ.

‘2020ರ   ಏಪ್ರಿಲ್‌ನಲ್ಲಿ ತಮ್ಮ ಗೋದಾಮಿಗೆ  ಕರೆಸಿಕೊಂಡಿದ್ದ  ಮುನಿರತ್ನ  ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರದ ದೃಶ್ಯವನ್ನು ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಬಿಬಿಎಂಪಿ ಸದಸ್ಯರೊಬ್ಬರ ಜೊತೆ ಎಚ್‌ಐವಿ ಸೋಂಕಿತೆಯನ್ನು ಲೈಂಗಿಕ ಸಂಪರ್ಕಕ್ಕೆ ಒಳಪಡಿಸಿ, ಅದನ್ನೂ ವಿಡಿಯೊ ಚಿತ್ರೀಕರಣ ಮಾಡಿಸಿದ್ದರು. ನನ್ನನ್ನೇ ಬಳಸಿಕೊಂಡು ಮತ್ತೊಬ್ಬ ರಾಜಕೀಯ ಮುಖಂಡರ ಲೈಂಗಿಕ ಕ್ರಿಯೆಯ ವಿಡಿಯೊವನ್ನೂ ಚಿತ್ರೀಕರಿಸಿ ಕೊಂಡಿದ್ದರು’ ಎಂದು ಸಂತ್ರಸ್ತೆ ನ್ಯಾಯಾಧೀಶರ ಎದುರು ಹೇಳಿದ್ದಾರೆ.

ADVERTISEMENT

‘ಐಎಎಸ್‌ ಅಧಿಕಾರಿಯ ಪತಿ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿದ್ದ ಮಹಿಳೆಯ ಅಶ್ಲೀಲ ವಿಡಿಯೊ ಚಿತ್ರೀಕರಿಸಿ ಕೊಡುವಂತೆ ಮುನಿರತ್ನ ಸೂಚಿಸಿದ್ದರು. ಇದಕ್ಕಾಗಿ ಲಕ್ಷ್ಮೀ, ಕಿರಣ್‌ಕುಮಾರ್‌, ಲೋಹಿತ್‌ ಗೌಡ ಮತ್ತು ಮಂಜುನಾಥ ಎಂಬವರನ್ನು ನನ್ನೊಂದಿಗೆ ನಿಯೋಜಿಸಿದ್ದರು. ದೂರುದಾರ ಮಹಿಳೆಯನ್ನು ಗುಹಾಂತರ ರೆಸಾರ್ಟ್‌ಗೆ ಕರೆದೊಯ್ದು ವಿಡಿಯೊ ಚಿತ್ರೀಕರಿಸಲು ಪ್ರಯತ್ನಿಸಲಾಗಿತ್ತು. ಆಗ ಪ್ರಯತ್ನ ವಿಫಲವಾದ ಕಾರಣದಿಂದ ಚಿಕ್ಕ ಬಳ್ಳಾಪುರ ಸಮೀಪದ ಅಗಲಗುರ್ಕಿಯ ರೆಸಾರ್ಟ್‌ ಒಂದಕ್ಕೆ ಕರೆದೊಯ್ದು
ಅಲ್ಲಿ ನಿದ್ದೆ ಮಾತ್ರೆ ನೀಡಿ ವಿಡಿಯೊ
ಚಿತ್ರೀಕರಿಸಲಾಗಿತ್ತು’ ಎಂದು ದೂರಿದ್ದಾರೆ.

‘ದೂರುದಾರ ಮಹಿಳೆಯನ್ನು ಮತ್ತೊಮ್ಮೆ ಅಗಲಗುರ್ಕಿಯ ರೆಸಾರ್ಟ್‌ಗೆ ಕರೆದೊಯ್ದು ಅವರ ಬ್ಯಾಗ್‌ನಲ್ಲಿ ಗಾಂಜಾ ಸೇರಿದಂತೆ ಮಾದಕವಸ್ತುವನ್ನು
ಇರಿಸಿ ಪೊಲೀಸರಿಂದ ಬಂಧಿಸುವ ಪ್ರಯತ್ನವನ್ನೂ ಮಾಡಲಾಗಿತ್ತು. ಆದರೆ, ಪೊಲೀಸರು ನಮ್ಮನ್ನು ಹಿಂಬಾಲಿಸಿದರೂ ಹಾಗೆಯೇ ಬಿಟ್ಟು ಹೋಗಿದ್ದರು. ನಂತರ ಲೋಹಿತ್‌ ಗೌಡ ಮೂಲಕ ದೂರು ಕೊಡಿಸಿ ಅಧಿಕಾರಿಯೊಬ್ಬರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆಯನ್ನು ಬಂಧಿಸಲಾಗಿತ್ತು. ಅವರನ್ನು ಮುನಿರತ್ನ ಅವರ ಮನೆಗೆ ಕರೆತಂದು ಹಲ್ಲೆ ನಡೆಸಲಾಗಿತ್ತು. ಬಳಿಕ ಮಹಿಳೆಯನ್ನು ಬೆದರಿಸಿ ಊರಿಗೆ ಕಳುಹಿಸಲಾಗಿತ್ತು’ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

‘2020ರಿಂದ 2023ರವರೆಗೂ ಮುನಿರತ್ನ ಅವರು ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದರು. ಅವರು ಹೇಳಿದಂತೆ ಕೇಳದಿದ್ದರೆ ನನ್ನ ಮಗನನ್ನು ಅಪಹರಣ ಮಾಡಿಸುತ್ತಾರೆ ಎಂದು ಮುನಿರತ್ನ ಅವರ ಅಂಗರಕ್ಷಕ ಶ್ರೀನಿವಾಸ್‌ ಬೆದರಿಸುತ್ತಿದ್ದರು. ಮಾಗಡಿಯ ಮಾಜಿ ಶಾಸಕರೊಬ್ಬರ ಅಶ್ಲೀಲ ವಿಡಿಯೊ ಚಿತ್ರೀಕರಿಸಿ ಕೊಡಲು ಆರೋಪಿ ಹೇಳಿದ್ದರು. ವೈದ್ಯರೊಬ್ಬರ ಅಶ್ಲೀಲ ವಿಡಿಯೊ ಮಾಡಿಕೊಡುವಂತೆಯೂ ಬೇಡಿಕೆ ಇಟ್ಟಿದ್ದರು. ಮುನಿರತ್ನ, ಅವರ ಅಂಗರಕ್ಷಕ ವಿಜಯ್‌ಕುಮಾರ್‌, ಸಹೋದರ ಸುಧಾಕರ್‌, ಬೆಂಬಲಿಗರಾದ ಕಿರಣ್‌ಕುಮಾರ್‌ ಮತ್ತು ಲೋಹಿತ್‌ ಗೌಡ ಈ ಎಲ್ಲ ಕೃತ್ಯಗಳಲ್ಲಿ ಭಾಗಿಯಾಗಿದ್ದರು’ ಎಂದು ನ್ಯಾಯಾಧೀಶರ ಎದುರು ಮಹಿಳೆ ದೂರಿದ್ದಾರೆ.

‘₹400 ಕೋಟಿ ಬಿಡುಗಡೆ ಮಾಡಿದ್ದ ಅಧಿಕಾರಿ’

‘ತಮ್ಮ ಪತಿಯನ್ನು ಅತ್ಯಾಚಾರ ಆರೋಪದ ಪ್ರಕರಣದಿಂದ ಬಚಾವು ಮಾಡಲು ನೆರವು ನೀಡಿದ್ದಕ್ಕಾಗಿ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರು ಮುನಿರತ್ನ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಕ್ಕೆ ₹400 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು’ ಎಂಬ ಆರೋಪವೂ ಸಂತ್ರಸ್ತೆಯು ನ್ಯಾಯಾಧೀಶರ ಎದುರು ನೀಡಿರುವ ಹೇಳಿಕೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.