ADVERTISEMENT

ಕೆಂಪೇಗೌಡ ಬಡಾವಣೆ ಯೋಜನಾ ನಕ್ಷೆ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲು ಬಿಡಿಎ ಮೀನಮೇಷ

ಕೆಂಪೇಗೌಡ ಬಡಾವಣೆ: ಸೂಚನೆ ಪಾಲಿಸದ ಬಿಡಿಎಗೆ ರೇರಾ ಮತ್ತೆ ತರಾಟೆ

ಪ್ರವೀಣ ಕುಮಾರ್ ಪಿ.ವಿ.
Published 4 ನವೆಂಬರ್ 2020, 19:12 IST
Last Updated 4 ನವೆಂಬರ್ 2020, 19:12 IST
ಕೆಂಪೇಗೌಡ ಬಡಾವಣೆ
ಕೆಂಪೇಗೌಡ ಬಡಾವಣೆ    

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮಂಜೂರಾತಿ ಪಡೆದ ಯೋಜನಾ ನಕ್ಷೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವಂತೆ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ನೀಡಿದ್ದ ಸೂಚನೆ ಪಾಲಿಸಲು ಬಿಡಿಎ ಮೀನಮೇಷ ಎಣಿಸುತ್ತಿದೆ. ಬಿಡಿಎ ಈ ನಡೆ ರೇರಾ ಕೆಂಗಣ್ಣಿಗೆ ಗುರಿಯಾಗಿದೆ.

ನಾಡಪ್ರಭು ಕೆಂಪೇಗೌಡ (ಎನ್‌ಪಿಕೆ) ಬಡಾವಣೆಯ ಅಭಿವೃದ್ಧಿ ವಿಚಾರದಲ್ಲಿ ಬಿಡಿಎ ನಿವೇಶನದಾರರ ಜೊತೆ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಎನ್‌ಪಿಕೆ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯು ರೇರಾಕ್ಕೆ ದೂರು ನೀಡಿತ್ತು. ಇದರ ವಿಚಾರಣೆ ನಡೆಸಿದ್ದ ರೇರಾ ಬಡಾವಣೆಯ ಯೋಜನಾ ನಕ್ಷೆಗಳನ್ನು ಬಿಡಿಎ ವೆಬ್‌ಸೈಟ್‌ನಲ್ಲಿ (http://bdabengaluru.org) ಎರಡು ವಾರಗಳ ಒಳಗೆ ಪ್ರಕಟಿಸುವಂತೆ 2020ರ ಜನವರಿ 31ರಂದು ಬಿಡಿಎಗೆ ಸೂಚನೆ ನೀಡಿತ್ತು. ಈ ವಿವರಗಳನ್ನು ಬಿಡಿಎ ತನ್ನ ವೆಬ್‌ಸೈಟ್‌ನಲ್ಲಿ ಇನ್ನೂ ಪ್ರಕಟಿಸಿಲ್ಲ.

ಬಡಾವಣೆ ಕುರಿತು ಎನ್‌ಪಿಕೆ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ದೂರುಗಳನ್ನು ಮಂಗಳವಾರ ವಿಚಾರಣೆ ನಡೆಸಿದ ರೇರಾ ಬಿಡಿಎ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿತು.

ADVERTISEMENT

‘ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸುವ ಬಡಾವಣೆಗಳಿಗೆ ಮಂಜೂರಾತಿ ನೀಡುವ ನೀವೇ ನಿಮ್ಮ ಯೋಜನೆಯ ಬಗ್ಗೆಯೇ ಇಷ್ಟೊಂದು ಅನಾದರ ಪ್ರದರ್ಶಿಸಿದರೆ ಹೇಗೆ ಎಂದು ರೇರಾ ಖಾರವಾಗಿ ಪ್ರಶ್ನೆ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.

ಯೋಜನಾ ನಕ್ಷೆ ವೆಬ್‌ಸೈಟ್‌ನಲ್ಲಿ ಪ್ರಕಟಿಸದೇ ಇರುವ ಬಗ್ಗೆ ಸಮಜಾಯಿಷಿ ನೀಡಿದ ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ, ‘ನಗರ ಯೋಜನಾ ವಿಭಾಗದಿಂದ ಮಂಜೂರಾತಿ ಪಡೆದ ನಕ್ಷೆ ಪ್ರಕಾರ ಬಡಾವಣೆ ಅಭಿವೃದ್ಧಿಪಡಿಸುವುದಕ್ಕೆ ಸಾಧ್ಯವಾಗಿಲ್ಲ. ಪರಿಷ್ಕೃತ ಯೋಜನಾ ನಕ್ಷೆಗೆ ನಗರ ಯೋಜನಾ ವಿಭಾಗದಿಂದ ಮತ್ತೆ ಮಂಜೂರಾತಿ ಪಡೆಯಬೇಕಿದೆ. ಆ ಬಳಿವೇ ಯೋಜನಾ ನಕ್ಷೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದರು.

ಆರಂಭದಲ್ಲಿ ಹಸಿರು ನ್ಯಾಯಮಂಡಳಿ ಆದೇಶದ ಪ್ರಕಾರ ಕೆರೆ, ರಾಜಕಾಲುವೆಗಳಿಗೆ ಬಿಡಿಎ ಮೀಸಲು ಪ್ರದೇಶಗಳನ್ನು ಕಾಯ್ದಿರಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್‌ ಹಸಿರು ನ್ಯಾಯಮಂಡಳಿಯ ಆದೇಶವನ್ನು ಮಾರ್ಪಾಡು ಮಾಡಿ ಜಲಕಾಯಗಳ ಮೀಸಲು ಪ್ರದೇಶಗಳ ವ್ಯಾಪ್ತಿಗಳನ್ನು ಬದಲಾಯಿಸಿ ತೀರ್ಪು ನೀಡಿತ್ತು.

‘ಮೀಸಲು ಪ್ರದೇಶ ಗುರುತಿಸುವ ಹೊಸ ಮಾನದಂಡ ಪ್ರಕಾರ ಮೂಲ ಯೋಜನಾ ನಕ್ಷೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಕೆಲವೆಡೆ ತ್ಯಾಜ್ಯನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣಕ್ಕೆ ಸ್ಥಳೀಯ ರೈತರಿಂದ ವಿರೋಧ ವ್ಯಕ್ತವಾಗಿದೆ. ಕೆಲವೆಡೆ ಭೂಸ್ವಾಧೀನವೂ ಪೂರ್ಣಗೊಂಡಿಲ್ಲ. ಜಾಗ ನೀಡಿರುವ ರೈತರಿಗೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಬೇಕಾಗುತ್ತದೆ. ತಾವು ನೀಡಿದ ಜಾಗದಲ್ಲೇ ಅಭಿವೃದ್ಧಿಪಡಿಸಿದ ನಿವೇಶನ ಒದಗಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ’ ಎಂದು ಎಂಜಿನಿಯರಿಂಗ್‌ ಸದಸ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂಲ ಯೋಜನಾ ನಕ್ಷೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಿದ್ದರೂ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳಿಗೆ ಅದರಿಂದ ಯಾವುದೇ ಅಡ್ಡಿಯಾಗದು. ಇದರಿಂದ ನಿವೇಶನದಾರರಿಗೆ ಯಾವುದೇ ಸಮಸ್ಯೆ ಆಗದು’ ಎಂದರು.

‘ಇನ್ನು ಎರಡು ವಾರಗಳ ಒಳಗೆ ಬಡಾವಣೆಯ ಪರಿಷ್ಕೃತ ಯೋಜನಾ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ರೇರಾ ಮತ್ತೆ ಗಡುವು ವಿಧಿಸಿದೆ’ ಎಂದು ಮುಕ್ತ ವೇದಿಕೆಯ ಸದಸ್ಯ ಅನಿಲ್‌ ನವಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾರದರ್ಶಕವಾಗಿದ್ದರೆ ಬಿಡಿಎಗೆ ಒಳ್ಳೆಯದು’

ಬಡಾವಣೆಯ ಯೋಜನೆ ನಕ್ಷೆಯನ್ನು ಬಹಿರಂಗಪಡಿಸಿ ಪಾರದರ್ಶಕವಾಗಿ ನಡೆದುಕೊಂಡರೆ ಬಿಡಿಎಗೆ ಒಳ್ಳೆಯದು. ಇದರಿಂದ ಒತ್ತುವರಿ ಮೇಲೆ ನಿಗಾ ಇರುವುದು ಸುಲಭವಾಗುತ್ತದೆ ಎನ್ನುತ್ತಾರೆ ನಿವೇಶನದಾರರು.

‘ನನಗೆ ಹಂಚಿಕೆಯಾದ ನಿವೇಶನದ ಪಕ್ಕದಲ್ಲಿ ಏನಾಗುತ್ತಿದೆ ಎಂಬುದೇ ನನಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ನೀಡಿದರೆ ನಮಗೂ ಅನುಕೂಲ, ಬಿಡಿಎಗೂ ಅನುಕೂಲ’ ಎಂದು ಮುಕ್ತವೇದಿಕೆಯ ಎ.ಎಸ್‌.ಸೂರ್ಯಕಿರಣ್‌ ಅಭಿಪ್ರಾಯಪಟ್ಟರು.

‘ಇಷ್ಟೊಂದು ವಿಸ್ತಾರವಾದ ಬಡಾವಣೆಯ ಅನುಷ್ಠಾನ ಹಂತದಲ್ಲಿ ಕೆಲವು ಬದಲಾವಣೆಗಳು ಅನಿವಾರ್ಯ. ನಾವು ಒಮ್ಮೆ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಬಳಿಕ ಅದಕ್ಕೆ ಬದ್ಧವಾಗಿರಬೇಕಾಗುತ್ತದೆ. ಬಳಿಕ ಸಣ್ಣ ಬದಲಾವಣೆ ಮಾಡಬೇಕಾದರೂ ನಿವೇಶನದಾರರಿಂದ ತಕರಾರು ಎದುರಾಗುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಬಿಡಿಎ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.