ADVERTISEMENT

ಅಪರೂಪದ ಕಾಯಿಲೆ: ಮಕ್ಕಳಿಗೆ ಅಗತ್ಯ ಚಿಕಿತ್ಸೆ-ಸಚಿವ ಶರಣ ಪ್ರಕಾಶ್ ಪಾಟೀಲ

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 18:01 IST
Last Updated 14 ನವೆಂಬರ್ 2024, 18:01 IST
ಶರಣ ಪ್ರಕಾಶ್ ಪಾಟೀಲ
ಶರಣ ಪ್ರಕಾಶ್ ಪಾಟೀಲ   

ಬೆಂಗಳೂರು: ‘ಅಪರೂಪದ ಕಾಯಿಲೆ ಹೊಂದಿರುವ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಭರವಸೆ ನೀಡಿದರು.

ಕೇರ್ ಆ್ಯಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಟ್ರಸ್ಟ್ (ಸಿಪಿಸಿಟಿ) ನಗರದಲ್ಲಿ ಗುರುವಾರ ಆಯೋಜಿಸಿದ್ದ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವವರಿಗೆ ಉಚಿತ ಔಷಧ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅಪರೂಪದ ಕಾಯಿಲೆ ಎದುರಿಸುತ್ತಿರುವವರಿಗೆ ಚಿಕಿತ್ಸೆ ಹಾಗೂ ಉಚಿತ ಔಷಧಕ್ಕೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕ್ರಮವಹಿಸಲಾಗಿದೆ. ಇದರಿಂದ ಸಮಸ್ಯೆ ಎದುರಿಸುತ್ತಿರುವವರ ಕುಟುಂಬಕ್ಕೆ ಆರ್ಥಿಕ ಹೊರೆ ತಗ್ಗಲಿದೆ. ಚಿಕಿತ್ಸೆ ಹಾಗೂ ಔಷಧಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದಲೂ ಹೆಚ್ಚುವರಿಯಾಗಿ ₹ 75 ಕೋಟಿ ನೀಡಲಾಗಿದೆ. ಮಕ್ಕಳಲ್ಲಿ ಈ ರೀತಿಯ ಸಮಸ್ಯೆಗಳನ್ನು ತಡೆಯಲು, ಪ್ರಸವಪೂರ್ವ ರೋಗನಿರ್ಣಯ ಹಾಗೂ ಆರಂಭಿಕ ಹಂತದಲ್ಲೇ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಹೆಚ್ಚು ಗಮನ ಹರಿಸಲಾಗುವುದು’ ಎಂದರು.

ADVERTISEMENT

‘ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಅಪರೂಪದ ಕಾಯಿಲೆ ಹೊಂದಿರುವ ಮಕ್ಕಳ ಚಿಕಿತ್ಸೆಗಾಗಿ ದೇಶದಲ್ಲೇ ಮೊದಲ ಬಾರಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲಾಗಿದೆ’ ಎಂದು ಹೇಳಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಅಪರೂಪದ ಕಾಯಿಲೆ ಎದುರಿಸುತ್ತಿರುವವರಿಗೆ ಅಗತ್ಯ ಚಿಕಿತ್ಸೆ ಹಾಗೂ ಔಷಧ ಒದಗಿಸಲು ಖಾಸಗಿ ಸಂಸ್ಥೆಗಳೂ ಸರ್ಕಾರದ ಜತೆಗೆ ಕೈಜೋಡಿಸಬೇಕು’ ಎಂದರು. 

ಟ್ರಸ್ಟ್‌ನ ಅಧ್ಯಕ್ಷರಾದ ಲಕ್ಷ್ಮೀಕಾಂತನ್, ‘ಎಸ್‌ಎಂಎ (ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ) ಆನುವಂಶಿಕ ಕಾಯಿಲೆ ಎದುರಿಸುತ್ತಿರುವ 16 ವರ್ಷದವರೆಗಿನ ಕರ್ನಾಟಕದ 50 ಮಕ್ಕಳಿಗೆ ಜೀವನಪೂರ್ತಿ ಉಚಿತವಾಗಿ ಔಷಧ ಒದಗಿಸಲಾಗುವುದು’ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ಸಂಜಯ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.