ADVERTISEMENT

ರಿಯಲ್‌ ಎಸ್ಟೇಟ್‌ ಕೊಡಗಿನ ಪರಿಸರಕ್ಕೆ ಆಪತ್ತು: ಕಾವೇರಿ ಉಳಿಸಿ ಅಭಿಯಾನದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:45 IST
Last Updated 25 ಮಾರ್ಚ್ 2024, 15:45 IST
ಮುತ್ತಣ್ಣ
ಮುತ್ತಣ್ಣ   

ಬೆಂಗಳೂರು: ‘ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ಯೋಜನೆಗಳಿಂದ ಕಾವೇರಿ ನದಿ ಹಾಗೂ ಪರಿಸರಕ್ಕೆ ಆಪತ್ತು ಎದುರಾಗಿದೆ’ ಎಂದು ‘ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನ’ದ ಸದಸ್ಯರು ಅಳಲು ತೋಡಿಕೊಂಡರು.

‘ವಾಣಿಜ್ಯ ಉದ್ದೇಶಕ್ಕೆ ಅವ್ಯಾಹತವಾಗಿ ಭೂಪರಿವರ್ತನೆ ನಡೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಹಸಿರು ಹೊದಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕಾವೇರಿ ನದಿಯಲ್ಲಿ ಒಳಹರಿವು ಕ್ಷೀಣಿಸುತ್ತಿದೆ. ಇದೇ ರೀತಿ ಭೂಪರಿವರ್ತನೆಗೆ ಅವಕಾಶ ಮುಂದುವರಿದರೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ’ ಎಂದು ಅಭಿಯಾನದ ಸಂಯೋಜಕ ಸಿ.ಪಿ.ಮುತ್ತಣ್ಣ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಈ ವರ್ಷ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ 1.30 ಕೋಟಿ ಜನಸಂಖ್ಯೆಗೆ ಕಾವೇರಿ ನದಿ ಕುಡಿಯುವ ನೀರು ಒದಗಿಸುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ವಾಣಿಜ್ಯ ಭೂಪರಿವರ್ತನೆ ಹಾಗೂ ಅರಣ್ಯ ನಾಶವೇ ಕುಡಿಯುವ ನೀರಿನ ಸಮಸ್ಯೆಗೆ ಕಾರಣ’ ಎಂದು ಹೇಳಿದರು.

ADVERTISEMENT

‘ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲದಲ್ಲಿ ನೂರಾರು ಎಕರೆ ಕಾಫಿ ತೋಟ ನಾಶಪಡಿಸಿ, ಐಷಾರಾಮಿ ಕಾಲೊನಿ ನಿರ್ಮಿಸಲಾಗುತ್ತಿದೆ. ತಮಿಳುನಾಡಿನ ಜನರು ಕಾವೇರಿ ನದಿಯನ್ನು ಪೂಜಿಸಿದರೆ, ಅಲ್ಲಿನ ಉದ್ಯಮಿಯೊಬ್ಬರು ಕಾವೇರಿ ಜಲಾನಯನ ಪ್ರದೇಶವನ್ನೇ ನಾಶ ಪಡಿಸುತ್ತಿದ್ದಾರೆ. ಚಿನ್ನಾಭರಣ ಮಳಿಗೆ ಮಾಲೀಕರೊಬ್ಬರು ಮಡಿಕೇರಿಯಲ್ಲಿ ಪ್ರತಿಷ್ಠಿತ ಕಾಲೊನಿ ನಿರ್ಮಿಸಿದ್ದಾರೆ. ಗೋಣಿಕೊಪ್ಪಲು ಹಾಗೂ ಹಾತೂರು ಭಾಗದಲ್ಲಿ ಲೇಔಟ್ ತಲೆಯೆತ್ತಿದೆ. ಸಿದ್ದಾಪುರದ ಬಳಿ ರೆಸಾರ್ಟ್‌ ಮಾಲೀಕರೊಬ್ಬರು ಬಿಬಿಟಿಸಿ ಕಂಪನಿ ಆಸ್ತಿ ಖರೀದಿಸಿ ಅದನ್ನು ರಿಯಲ್‌ ಎಸ್ಟೇಟ್‌ಗೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಭತ್ತದ ಗದ್ದೆಗಳೂ ಬಡಾವಣೆಗಳಾಗಿ ಪರಿವರ್ತನೆ ಆಗುತ್ತಿವೆ’ ಎಂದು ವಿವರಿಸಿದರು.

‘ಕೊಡಗು ಹಾಗೂ ಬೆಂಗಳೂರು ಜನರ ಹಿತದೃಷ್ಟಿಯಿಂದ ರಿಯಲ್‌ ಎಸ್ಟೇಟ್‌ ಯೋಜನೆ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು.

ಹಣ ಪಡೆದ ಎನ್‌ಒಸಿ: ‘ಗ್ರಾಮ ಪಂಚಾಯಿತಿಗಳಲ್ಲಿ ಹಣ ಪಡೆದು ನಿರಾಪೇಕ್ಷಣಾ ಪತ್ರ (ಎನ್‌ಒಸಿ) ನೀಡಲಾಗುತ್ತಿದೆ. ಪಂಚಾಯಿತಿ ಸದಸ್ಯರು ಜಿಲ್ಲೆಯ ಜನರ ಹಿತಕಾಪಾಡುವ ಬದಲಿಗೆ, ಜಿಲ್ಲೆಗೆ ಹೆಚ್ಚು ಜನರು ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತಿದ್ದಾರೆ’ ಎಂದು ಆಪಾದಿಸಿದರು.

ಪರಿಸರವಾದಿ ಜೋಸೆಫ್‌ ಹೂವರ್ ಮಾತನಾಡಿ, ‘ಕಾವೇರಿ ಜಲಾನಯನ ಪ್ರದೇಶ ಉಳಿಸಲು ಹೋರಾಟ ಅನಿವಾರ್ಯ. ರಿಯಲ್‌ ಎಸ್ಟೇಟ್‌ ಯೋಜನೆಗಳ ವಿರುದ್ದ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಅಗತ್ಯಬಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಕಾಫಿ ಬೆಳೆಗಾರ ದೇವಯ್ಯ ಮಾತನಾಡಿ, ‘ಭತ್ತದ ಗದ್ದೆಗಳನ್ನೂ ಲೇಔಟ್‌ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲದ ಸಮಸ್ಯೆ ಎದುರಾಗುತ್ತಿದೆ. ಗದ್ದೆಗಳಲ್ಲಿ ನೀರು ನಿಂತು ಅಂತರ್ಜಲ ವೃದ್ದಿ ಆಗುತ್ತಿತ್ತು. ಈಗ ಬೇಸಿಗೆಯಲ್ಲಿ ನೀರು ಲಭಿಸುತ್ತಿಲ್ಲ. ಜಿಲ್ಲೆಯಲ್ಲಿ ಮಳೆಗಾಲದ ಅವಧಿಯೂ ಕಡಿಮೆಯಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.