ಬೆಂಗಳೂರು: ರಾಜ್ಯದ ವಿದ್ಯಾಸಂಸ್ಥೆಗಳಲ್ಲಿ ‘ಮಾರ್ಗದರ್ಶಕ ವ್ಯವಸ್ಥೆ’ ಅಳವಡಿಸಲು ಪ್ರೊ.ಎಂ.ಆರ್. ದೊರೆಸ್ವಾಮಿ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶೈಕ್ಷಣಿಕ ಸುಧಾರಣೆ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ನಿಟ್ಟಿನಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ.
ಈ ವ್ಯವಸ್ಥೆ ಅಳವಡಿಕೆಗೆ ಬೇಕಾದ ತಾತ್ವಿಕ ಹಾಗೂ ಶೈಕ್ಷಣಿಕ ಆಯಾಮಗಳನ್ನು ಚರ್ಚಿಸಿ, ಬೇಕಾದ ಕ್ರಿಯಾ ಯೋಜನೆಯನ್ನು ರೂಪಿಸಲು ಸಮಿತಿಯು ಹೇಳಿದೆ. ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
‘ಯುಜಿಸಿ, ಎಐಸಿಟಿಇ ಹಾಗೂ ಎಂಸಿಐಗಳಂತಹ ರಾಷ್ಟ್ರೀಯ ಶಿಕ್ಷಣ ನಿಯಂತ್ರಣ ಸಂಸ್ಥೆಗಳು ಇಂತಹ ಮಾರ್ಗದರ್ಶಕ ವ್ಯವಸ್ಥೆಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಈಗಾಗಲೇ ಆದೇಶಿಸಿವೆ. ರಾಜ್ಯದಲ್ಲಿ ಕೂಡ ಈ ವ್ಯವಸ್ಥೆಯನ್ನು ಅಳವಡಿಸಲು ಸರ್ಕಾರ ಮುಂದಾಗಬೇಕು’ ಎಂದು ದೊರೆಸ್ವಾಮಿ ಹೇಳಿದರು.
‘ತಾಂತ್ರಿಕ ಶಿಕ್ಷಣಸಂಸ್ಥೆಗಳಿಗೆ ಸಂಬಂಧಿಸಿದ ಜೀವನ ಕೌಶಲಗಳು ಹಾಗೂ ವೃತ್ತಿನಿಷ್ಠೆ ತತ್ವಗಳನ್ನು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಬೇಕು’ ಎಂದು ವಿಟಿಯು ವಿಶ್ರಾಂತ ಕುಲಪತಿ ಪ್ರೊ. ಕಿಂಚಾ ಸಲಹೆ ನೀಡಿದರು.
ಬೆಂಗಳೂರು ಕೇಂದ್ರವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಾಫೆಟ್, ‘ವೃತ್ತಿಪರ ಶಿಕ್ಷಣ ಸಂಸ್ಥೆಗಳು ಹಾಗೂ ಸಾಂಪ್ರದಾಯಿಕ ವಿದ್ಯಾಸಂಸ್ಥೆಗಳ ವಿಭಿನ್ನತೆಗೆ ಅನುಸಾರವಾಗಿ ಕ್ರಿಯಾಯೋಜನೆಯನ್ನು ರಚಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಪ್ರಚಲಿತದಲ್ಲಿರುವ ಮಾರ್ಗದರ್ಶಕ ವ್ಯವಸ್ಥೆ ಮಾದರಿಯ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಸಿದ್ದಪ್ಪ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.