ಬೆಂಗಳೂರು: ‘ಬ್ಯಾಂಕ್, ವಿಮೆ ಸೇರಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳ ನೇಮಕಾತಿ ಮತ್ತು ಬಡ್ತಿ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು. ಇದಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡದಲ್ಲಿಯೂ ಪರೀಕ್ಷೆ ಬರೆಯುವ ಅವಕಾಶವನ್ನು ಸ್ವಾಗತಿಸಿರುವ ಅವರು, ‘ಕನ್ನಡದ ಸಚಿವರಿದ್ದಲ್ಲಿ ಕನ್ನಡತನ ರೂಪುಗೊಳ್ಳುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ. ರೈಲ್ವೆ ಇಲಾಖೆಯಲ್ಲಿ ಬಡ್ತಿ ನೀಡಲು ನಡೆಸುವ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಈ ಹಿಂದೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯುವ ಅವಕಾಶವಿತ್ತು. ಇದರಿಂದಾಗಿ ಅನೇಕ ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದರು. ಇನ್ನು ಮುಂದೆ ಈ ಸಮಸ್ಯೆ ಪರಿಹಾರವಾಗಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖೆಗ ನೇಮಕಾತಿ ಪರೀಕ್ಷೆಗಳು ಕನ್ನಡದಲ್ಲಿ ನಡೆದು, ಸ್ಥಳೀಯರಿಗೆ ಉದ್ಯೋಗ ದೊರಕಬೇಕು. ಇದಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕು. ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸದಾ ಮುಂಚೂಣಿಯಲ್ಲಿರುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.