ಬೆಂಗಳೂರು: ರಾಮಮೂರ್ತಿನಗರ ಪೊಲೀಸರು ಅಕ್ರಮವಾಗಿ 750 ಕೆ.ಜಿ ರಕ್ತಚಂದನ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸದೇ ಮುಚ್ಚಿಟ್ಟಿದ್ದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕಮಿಷನರ್ ಕಮಲ್ ಪಂತ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ಸಲ್ಲಿಕೆಯಾಗಿದೆ.
ವಿಜಿನಾಪುರದ ನಿವಾಸಿ ಜಗನ್ ಕುಮಾರ್ ಎಂಬುವರು ಮಾ. 16ರಂದು ದೂರು ಸಲ್ಲಿಸಿದ್ದಾರೆ. ರಕ್ತಚಂದನದ ಫೋಟೊ ಹಾಗೂ ವಿಡಿಯೊಗಳನ್ನು ದೂರಿನ ಜೊತೆ ನೀಡಿದ್ದಾರೆ. ದೂರು ಪರಿಶೀಲಿಸಿರುವ ಕಮಿಷನರ್, ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಿಗೆ ಸೂಚಿಸಿದ್ದಾರೆ.
‘ರಾಮಮೂರ್ತಿನಗರ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಮೌನೇಶ್ ಹಾಗೂ ಅರವಿಂದ್‌ಕುಮಾರ್ ನೇತೃತ್ವದ ತಂಡ, ಬೆಳ್ತಂಗಡಿ ಹಾಗೂ ಮಂಗಳೂರು ನಡುವಿನ ವೇಣೂರು ಅರಣ್ಯ ಪ್ರದೇಶದಲ್ಲಿ 2021ರ ಅಕ್ಟೋಬರ್ 23ರಂದು 750 ಕೆ.ಜಿ ರಕ್ತ ಚಂದನದ ತುಂಡುಗಳನ್ನು (ಸುಮಾರು ₹ 80 ಲಕ್ಷ ಮೌಲ್ಯದ್ದು) ಜಪ್ತಿ ಮಾಡಿತ್ತು. ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೇ, ತುಂಡುಗಳನ್ನು ಇನ್ನೋವಾ ಕಾರಿನಲ್ಲಿ ರಾಮಮೂರ್ತಿನಗರ ಠಾಣೆಗೆ ತಂದಿತ್ತು’ ಎಂದು ದೂರಿನಲ್ಲಿ ಜಗನ್‌ಕುಮಾರ್ ಉಲ್ಲೇಖಿಸಿದ್ದಾರೆ.
‘ಠಾಣೆಯಲ್ಲಿ ರಕ್ತಚಂದನದ ತುಂಡುಗಳನ್ನು ಅಕ್ರಮವಾಗಿ ಇಟ್ಟುಕೊಳ್ಳಲಾಗಿತ್ತು. ಅವುಗಳನ್ನು ನ್ಯಾಯಾಲಯಕ್ಕೂ ಹಾಜರುಪಡಿಸಿಲ್ಲ. ಜೊತೆಗೆ, ಯಾವುದೇ ಎಫ್‌ಐಆರ್ ಸಹ ದಾಖಲಿಸಿಲ್ಲ. ಸದ್ಯ ರಕ್ತಚಂದನ ತುಂಡುಗಳು ಎಲ್ಲಿವೆ ಎಂಬುದು ಗೊತ್ತಿಲ್ಲ. ಪೊಲೀಸರೇ ಮುಚ್ಚಿಟ್ಟಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.
ಆರೋಪ ಸುಳ್ಳೆಂದ ಡಿಸಿಪಿ ಭೀಮಾಶಂಕರ್
‘750 ಕೆ.ಜಿ ರಕ್ತಚಂದನವನ್ನು ಪೊಲೀಸರು ಮುಚ್ಚಿಟ್ಟಿದ್ದಾರೆಂಬ ಆರೋಪ ಸುಳ್ಳು’ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಗಾಂಜಾ ಮಾರಾಟ ಪ್ರಕರಣ ಭೇದಿಸಲು ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಅದೇ ತಂಡ, ಗ್ರಾಹಕರ ವೇಷದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ವೇಣೂರಿನಲ್ಲಿ ಗಾಂಜಾ ಬಚ್ಚಿಟ್ಟಿದ್ದ ಬಗ್ಗೆ ಪೆಡ್ಲರ್ ಮಾಹಿತಿ ನೀಡಿದ್ದ. ಹೀಗಾಗಿ, ವಿಶೇಷ ತಂಡ ಗಾಂಜಾ ಜಪ್ತಿ ಮಾಡಲು ವೇಣೂರಿಗೆ ಹೋಗಿತ್ತು. ಪೆಡ್ಲರ್ ಸೂಚಿಸಿದ್ದ ಸ್ಥಳದಲ್ಲಿ ಗಾಂಜಾ ಬದಲು, 165 ಕೆ.ಜಿ ರಕ್ತಚಂದನದ 16 ತುಂಡುಗಳು ಪತ್ತೆಯಾಗಿದ್ದವು’ ಎಂದೂ ತಿಳಿಸಿದ್ದಾರೆ.
‘ತುಂಡುಗಳನ್ನು ಠಾಣೆಗೆ ತಂದಿದ್ದ ಪೊಲೀಸರು, ಆ ಬಗ್ಗೆ ಠಾಣೆ ಡೈರಿಯಲ್ಲಿ ನಮೂದಿಸಿದ್ದರು. ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಎರಡು ದಿನ ಬಿಟ್ಟು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ’ ಎಂದು ಭೀಮಾಶಂಕರ್ ಹೇಳಿದ್ದಾರೆ.
‘ರಕ್ತಚಂದನ ಮುಚ್ಚಿಟ್ಟಿದ್ದ ಬಗ್ಗೆ ದೂರು ಬರುತ್ತಿದ್ದಂತೆ ಎಸಿಪಿ ಮೂಲಕ ತನಿಖೆ ಮಾಡಿಸಲಾಗಿದೆ. ಅದರ ವರದಿಯನ್ನು ಸದ್ಯದಲ್ಲೇ ಕಮಿಷನರ್ ಅವರಿಗೆ ಸಲ್ಲಿಸಲಾಗುವುದು’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.