ADVERTISEMENT

ಜೊಂಡು ತೆರವು; ನೀರಿನ ಸಮಸ್ಯೆ ಪರಿಹಾರ

ಜಲಮಂಡಳಿ ಸಿಬ್ಬಂದಿಯಿಂದ ರಾತ್ರಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 16:10 IST
Last Updated 24 ಮಾರ್ಚ್ 2024, 16:10 IST
ನೆಟ್ಟಕಲ್ಲಪ್ಪ ಬ್ಯಾಲೆನ್ಸ್‌ ರಿಸರ್‌ವಾಯರ್‌ನಿಂದ ಕಾವೇರಿ ನೀರು ಸರಬರಾಜು ಮಾಡುವ ನಾಲೆಯ ಸ್ಕ್ರೀನ್‌ ರೈಲಿಂಗ್‌ನಲ್ಲಿ ಜೊಂಡು (ಜಲಸಸ್ಯ) ಸಿಲುಕಿಕೊಂಡಿತ್ತು.
ನೆಟ್ಟಕಲ್ಲಪ್ಪ ಬ್ಯಾಲೆನ್ಸ್‌ ರಿಸರ್‌ವಾಯರ್‌ನಿಂದ ಕಾವೇರಿ ನೀರು ಸರಬರಾಜು ಮಾಡುವ ನಾಲೆಯ ಸ್ಕ್ರೀನ್‌ ರೈಲಿಂಗ್‌ನಲ್ಲಿ ಜೊಂಡು (ಜಲಸಸ್ಯ) ಸಿಲುಕಿಕೊಂಡಿತ್ತು.   

ಬೆಂಗಳೂರು: ನೆಟ್ಟಕಲ್ಲಪ್ಪ ಬ್ಯಾಲೆನ್ಸ್‌ ರಿಸರ್‌ವಾಯರ್‌ನಿಂದ ಕಾವೇರಿ ನೀರು ಸರಬರಾಜು ಮಾಡುವ ನಾಲೆಯ ಸ್ಕ್ರೀನ್‌ ರೈಲಿಂಗ್‌ನಲ್ಲಿ ಜೊಂಡು (ಜಲಸಸ್ಯ) ಸಿಕ್ಕಿ ಹಾಕಿಕೊಂಡು ನೀರಿನ ಹರಿವಿಗೆ ತೊಂದರೆಯಾಗಿತ್ತು. ಜಲಮಂಡಳಿ ಸಿಬ್ಬಂದಿಯು ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ಸರಿಪಡಿಸಿ, ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಂಡಿದ್ದಾರೆ.

ನಾಲೆಗಳ ಪಾತ್ರದಲ್ಲಿ ಬೆಳೆದಿದ್ದ ಜೊಂಡು ಶನಿವಾರ ರಾತ್ರಿ ಬೀಸಿದ ಗಾಳಿಗೆ ಸ್ಕ್ರೀನ್‌ ರೈಲಿಂಗ್‌ನಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಕಾವೇರಿ ನೀರು ಪೂರೈಕೆಗೆ ತಡೆಯಾಗಿತ್ತು. ಒಂದೇ ದಿನ 1000 ಎಂಎಲ್‌ಡಿ ನೀರು ಕೊರತೆಯಾಗುವ ಸಂಭವ ಎದುರಾಗಿತ್ತು. ಸಿಬ್ಬಂದಿ ರಾತ್ರಿ 10 ರಿಂದ ತಡರಾತ್ರಿ 2ರವರೆಗೆ ಕೆಲಸ ಮಾಡಿ ತಡೆ ನಿವಾರಿಸಿದರು. ಸಿಬ್ಬಂದಿಯ ಪ್ರಯತ್ನದಿಂದಾಗಿ ನಗರಕ್ಕೆ ಎದುರಾಗಬಹುದಾಗಿದ್ದ ದೊಡ್ಡ ನೀರಿನ ಕೊರತೆ ತಪ್ಪಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ವಿವಿಧಡೆ ನೀರು ಪೂರೈಕೆ: ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಕೊಳೆಗೇರಿಗಳು ಹಾಗೂ ಜನಸಾಂದ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದ್ದು, ನಿತ್ಯ 1 ಲಕ್ಷ ಲೀಟರ್‌ ನೀರು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ರಾಮ್‌ಪ್ರಸಾತ್ ಮಾಹಿತಿ ನೀಡಿದರು.

ADVERTISEMENT

ನಗರದ ನಾಯಂಡಹಳ್ಳಿ-ಪಂತರಪಾಳ್ಯದ ಅಂಬೇಡ್ಕರ್ ಕೊಳೆಗೇರಿ, ಗಾಂಧಿನಗರ ಮತ್ತು ಬಂಗಾರಪ್ಪ ನಗರ ಕೊಳೆಗೇರಿಗೆಳಿಗೆ ಭಾನುವಾರ ಭೇಟಿ ನೀಡಿ, ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಪರಿಶೀಲನೆ ನಡೆಸಿದರು.

ಅಂಬೇಡ್ಕರ್ ಕೊಳೆಗೇರಿಯ 34 ಬ್ಲಾಕ್‌ಗಳಲ್ಲಿ 1,088 ಮನೆಗಳಿದ್ದು, ಸುಮಾರು 8 ಸಾವಿರ ಜನರು ವಾಸಿಸುತ್ತಿದ್ದಾರೆ. ಕೊಳೆಗೇರಿ ಮಂಡಳಿವತಿಯಿಂದ ಕೊರೆಸಲಾಗಿದ್ದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಈ ಪ್ರದೇಶದ ವಿವಿಧೆಡೆ 22 ಸಿಂಟೆಕ್ಸ್‌ ಟ್ಯಾಂಕ್‌ಗಳನ್ನು ಇರಿಸಲಾಗಿದೆ ಎಂದು ತಿಳಿಸಿದರು.

ಯಾವುದೇ ಕೊಳೆಗೇರಿಗಳಿಗೆ ಅಗತ್ಯ ಬಿದ್ದರೆ ಹೆಚ್ಚುವರಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವಂತೆ ರಾಮ್‌ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನ್ಯ ಉದ್ದೇಶಕ್ಕೆ ನೀರು ಬಳಕೆ:

ದಂಡ ಕಾವೇರಿ ನೀರು ಮತ್ತು ಕೊಳವೆಬಾವಿ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ‌ ಅನ್ಯ ಉದ್ದೇಶಕ್ಕೆ ಬಳಸಿರುವವರಿಗೆ ಜಲಮಂಡಳಿ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಪ್ರತಿ ಪ್ರಕರಣಕ್ಕೆ ತಲಾ ₹ 5,000ದಂತೆ ದಂಡ ವಿಧಿಸಲಾಗಿದೆ. ಬೆಂಗಳೂರು ಪೂರ್ವ–1ರಲ್ಲಿ ಒಂದು ಪ್ರಕರಣ, ಬೆಂಗಳೂರು ಪೂರ್ವ–2ರಲ್ಲಿ 2, ಬೆಂಗಳೂರು ಉತ್ತರ–2ರಲ್ಲಿ 2 ಪ್ರಕರಣ, ಬೆಂಗಳೂರು ಈಶಾನ್ಯದಲ್ಲಿ 1, ಬೆಂಗಳೂರು ಆಗ್ನೇಯ–1ರಲ್ಲಿ 12, ಬೆಂಗಳೂರು ಆಗ್ನೇಯ –2ರಲ್ಲಿ 1, ನೈರುತ್ಯದಲ್ಲಿ 3 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟು ₹ 1.10 ಲಕ್ಷ ದಂಡ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.