ADVERTISEMENT

ಸಾಕ್ಷಾತ್‌ ಸಮೀಕ್ಷೆ – ಜಯನಗರ: ಬಿಜೆಪಿ, ಕಾಂಗ್ರೆಸ್‌ಗೆ ಮರುಸಾಧನೆಯ ಪ್ರತಿಷ್ಠೆ!

ಪ್ರಜಾವಾಣಿ ವಿಶೇಷ
Published 6 ಮೇ 2023, 20:38 IST
Last Updated 6 ಮೇ 2023, 20:38 IST
   

ಆರ್‌. ಮಂಜುನಾಥ್‌

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರ ಮರುವಿಂಗಡಣೆ ನಂತರ ಎರಡು ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದು, ಕಳೆದ ಬಾರಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯತ್ತ ವಾಲಿತ್ತು. ಈ ಬಾರಿ ಬಿಜೆಪಿ ತನ್ನ ಹಿಂದಿನ ಗೆಲುವನ್ನು ಮತ್ತೆ ಸಾಧಿಸುವ ಹುಮ್ಮಸ್ಸಿನಲ್ಲಿದ್ದರೆ, ಕಾಂಗ್ರೆಸ್‌ ಹಿಂದಿನ ವಿಜಯವನ್ನು ತನ್ನ ಹೆಸರಿನಲ್ಲೇ ಉಳಿಸಿಕೊಳ್ಳುವ ಕಸರತ್ತು ನಡೆಸಿದೆ. ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಜೆಡಿಎಸ್‌ ಮೈತ್ರಿಯಿಂದ ಹೊರಬಂದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾತರಿಸುತ್ತಿದೆ.

ಬಿಜೆಪಿಯ ಬಿ.ಎನ್‌. ವಿಜಯಕುಮಾರ್‌ ಅವರು 2008 ಹಾಗೂ 2013ರಲ್ಲಿ ಹೆಚ್ಚಿನ ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. 2018ರಲ್ಲಿ ಮತದಾನಕ್ಕೆ ಮುನ್ನ ಅವರು ಮೃತಪಟ್ಟರು. ಚುನಾವಣೆ ಮುಂದಕ್ಕೆ ಹೋಯಿತು. ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಂದಮೇಲೆ ನಡೆದ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿತ್ತು. ಜೆಡಿಎಸ್‌ ಅಭ್ಯರ್ಥಿ ಕಣದಿಂದ ಹಿಂದೆ ಸರಿದರು. ವಿಜಯಕುಮಾರ್‌ ಅವರ ಸೋದರನಿಗೆ ಬಿಜೆಪಿ ಟಿಕೆಟ್‌ ನೀಡಿತು. ಅನುಕಂಪದ ಅಲೆ ಸಿಗಲಿಲ್ಲ. ಎರಡೂ ಪಕ್ಷಗಳು ಒಂದಾಗಿದ್ದರಿಂದ 1,843 ಮತಗಳ ಅಂತರದಲ್ಲಿ ಬಿಜೆಪಿ ಸೋತಿತು. ಈ ಬಾರಿ ಮೂರು ಪಕ್ಷಗಳೂ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿವೆ.

ADVERTISEMENT

ಕಾಂಗ್ರೆಸ್‌ನಿಂದ ಸೌಮ್ಯ ರೆಡ್ಡಿ ಮರು ಆಯ್ಕೆ ಬಯಸಿದ್ದರೆ, ಬಿಜೆಪಿಯಿಂದ ಕಾರ್ಪೊರೇಟರ್‌ ಆಗಿದ್ದ ಸಿ.ಕೆ. ರಾಮಮೂರ್ತಿ ಕಣಕ್ಕಿಳಿದಿದ್ದಾರೆ. ಸೌಮ್ಯ ರೆಡ್ಡಿ ತಮ್ಮ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು, ‘ಭ್ರಷ್ಟಾಚಾರರಹಿತ ಕಾಮಗಾರಿ ನಡೆಸಿದ್ದೇನೆ’ ಎಂದು ಹೇಳಿ ಮತಯಾಚಿಸುತ್ತಿದ್ದಾರೆ. ತಂದೆ ರಾಮಲಿಂಗಾರೆಡ್ಡಿ ಅವರ ಬೆಂಬಲವಿದ್ದರೂ ಕಳೆದ ಬಾರಿಯಷ್ಟು ಸಂಪೂರ್ಣ ಸಾಕ್ಷಾತ್‌ ಸಹಕಾರ ಸಿಗುತ್ತಿಲ್ಲ. ಏಕೆಂದರೆ, ಅವರೂ ಬಿಟಿಎಂ ಕ್ಷೇತ್ರದ ಅಭ್ಯರ್ಥಿ. ಅಲ್ಲದೆ ಕಳೆದ ಬಾರಿಯಂತೆ ಜೆಡಿಎಸ್‌ ಅಭ್ಯರ್ಥಿ, ಪಕ್ಷದ ನೆರವೂ ಇಲ್ಲ. ಹೀಗಾಗಿ ಹೋರಾಟ ತ್ರಾಸದಾಯಕವಾಗಿದೆ.

ಇನ್ನು, ‘ಬಿಜೆಪಿಯದ್ದೇ ಈ ಕ್ಷೇತ್ರ. ಇದನ್ನು ನಾವು ಮರುಸಾಧಿಸುತ್ತೇವೆ’ ಎಂದು ಸಿ.ಕೆ. ರಾಮಮೂರ್ತಿ ಹಾಗೂ ಇತರೆ ಕಾರ್ಪೊರೇಟರ್‌ಗಳು ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ಕಳೆದ ಬಾರಿ ಎರಡು ಪಕ್ಷಗಳು ಒಂದಾಗಿದ್ದರಿಂದ ಅಲ್ಪ ಹಿನ್ನಡೆಯಾಗಿತ್ತು. ಆದರೆ, ಈ ಬಾರಿ ಆ ಹಿನ್ನಡೆ ಮುನ್ನಡೆಯಾಗಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ಗುರಪ್ಪನಪಾಳ್ಯ, ತಿಲಕನಗರ, ಬೈರಸಂದ್ರ, ಶಾಖಾಂಬರಿ ನಗರ, ಜೆ.ಪಿ. ನಗರ, ಸಾರಕ್ಕಿ ಪ್ರದೇಶಗಳನ್ನು ಒಳಗೊಂಡಿರುವ ಜಯನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅದರದ್ದೇ ಆದ ಮತಗಳಿವೆ. ಜೆಡಿಎಸ್‌ ಕೂಡ ತನ್ನದೇ ಮತದಾರರನ್ನು ಹೊಂದಿದ್ದು, ಮತ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಅಭಿವೃದ್ಧಿ ಸೇರಿದಂತೆ ಕೊಳೆಗೇರಿಗಳ ಅಭಿವೃದ್ಧಿ ವಿಷಯದಲ್ಲಿ ಕ್ಷೇತದ ಜನತೆಯ ಅಸಮಾಧಾನವಿದೆ. ಇದು ಕ್ಷೇತ್ರ ಮರುರಚನೆಯಾದಂದಿನಿಂದಲೂ ಇರುವ ಸಮಸ್ಯೆಯಾಗಿದ್ದು, ಎಲ್ಲರೂ ಅವುಗಳ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ಸಿ.ಕೆ. ರಾಮಮೂರ್ತಿ ಹಾಗೂ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರಿಬ್ಬರಿಗೂ ಮರುಸಾಧನೆಯ ಪ್ರತಿಷ್ಠೆ ಎದುರಾಗಿದೆ. ನೇರ ಹಾಗೂ ತೀವ್ರ ಪೈಪೋಟಿ ಈ ಇಬ್ಬರ ನಡುವೆ ಇದೆ.

ಕಳೆದ ಬಾರಿ ಹಿಂದೆಜ್ಜೆ ಇರಿಸಿದ್ದ ಜೆಡಿಎಸ್‌ನಿಂದ ಕಾಳೇಗೌಡ ತಮಗಿದ್ದ ಬೆಂಬಲವನ್ನು ಈ ಬಾರಿ ಸಾಬೀತುಮಾಡುವ ಉತ್ಸಾಹದಲ್ಲಿದ್ದಾರೆ. ಆಮ್‌ ಆದ್ಮಿ ಪಾರ್ಟಿಯ ಮಹಾಲಕ್ಷ್ಮಿ ಸಿ. ‘ಬುದ್ಧಿವಂತ’ ಮತದಾರರನ್ನು ಸೆಳೆಯಲು ಯೋಜಿಸುತ್ತಿದ್ದಾರೆ. ಇವರಲ್ಲದೆ, ಬಿಎಸ್‌ಪಿಯ ಆರ್‌. ಸೆಲ್ವಕುಮಾರ್‌, ಕರ್ನಾಟಕ ರಾಷ್ಟ್ರ ಸಮಿತಿಯ ಬಿ. ಮಣಿಕಂಠ ದ್ರಾವಿಡರ್, ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಡಿ. ಸಂತೋಷ್‌ ಬಿ. ನಾಯಕ್‌ ಸೇರಿದಂತೆ 15 ಮಂದಿ ಕಣದಲ್ಲಿದ್ದಾರೆ. ಎಂಟು ಮಂದಿ ಪಕ್ಷೇತರರಿರುವುದರಿಂದ ಮತವಿಭಜನೆಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.