ಬೆಂಗಳೂರು: ನಗರದ ಸಂಜಯ್‌ನಗರದಲ್ಲಿ ಇರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಕಚೇರಿಯಲ್ಲಿ ಜನವರಿ 19ರಂದು ಬೆಳಿಗ್ಗೆ 10ಗಂಟೆಗೆ ದಕ್ಷಿಣ ಮತ್ತು ನೈರುತ್ಯ ವಲಯದ ಹಿಂದಿ ಭಾಷಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
‘ಇದಕ್ಕೂ ಮೊದಲು ಮುಂಬೈ ಮತ್ತು ಜೋಧಪುರದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. 2023–24ರಲ್ಲಿ ನಡೆಯುತ್ತಿರುವ ಮೂರನೇ ಸಮ್ಮೇಳನ ಇದಾಗಿದೆ’ ಎಂದು ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಹಿಂದಿ ಭಾಷಾ ಇಲಾಖೆಯ ದಕ್ಷಿಣ ಮತ್ತು ನೈಋತ್ಯ ವಲಯದ ಜಂಟಿ ಕಾರ್ಯದರ್ಶಿ ಮೀನಾಕ್ಷಿ ಜೊಲ್ಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ಕುಮಾರ್ ಮಿಶ್ರಾ ಅವರು ಸಮ್ಮೇಳನದ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.
ದಕ್ಷಿಣ ಭಾಗವು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವನ್ನು ಒಳಗೊಂಡಿದೆ. ನೈರುತ್ಯ ಭಾಗದಲ್ಲಿ ಕೇರಳ, ತಮಿಳುನಾಡು, ಪುದುಚೇರಿ ಮತ್ತು ಲಕ್ಷದ್ವೀಪ ಸೇರಿವೆ. ಈ ಎರಡೂ ವಲಯದ ಭಾಷಾ ಸಮ್ಮೇಳನ ಇದಾಗಿದೆ ಎಂದು ತಿಳಿಸಿದರು.
ಈ ಎರಡೂ ವಲಯಕ್ಕೆ ಸೇರಿದ ವಿವಿಧ ಬ್ಯಾಂಕ್‌ಗಳು, ಉದ್ದಿಮೆಗಳು ಮತ್ತು ಕಚೇರಿಗಳಲ್ಲಿ ಹಿಂದಿ ಭಾಷೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ವಿವಿಧ ವಿಭಾಗಗಳಲ್ಲಿ ಒಟ್ಟು 32 ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಪ್ರಾದೇಶಿಕ ಕಚೇರಿಯ ಅಧಿಕಾರಿಗಳು, ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ಮತ್ತು ಉದ್ದಿಮೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.