ADVERTISEMENT

1500 ರೋಗಿಗಳಿಗೆ ಪುನರ್ವಸತಿ

ಚಿಕಿತ್ಸೆಯ ಜತೆಗೆ ಜೀವನವಿಧಾನದ ಬಗ್ಗೆ ಮಾರ್ಗದರ್ಶನ * ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸೇವೆ

ವರುಣ ಹೆಗಡೆ
Published 28 ಮೇ 2020, 20:10 IST
Last Updated 28 ಮೇ 2020, 20:10 IST
ಡಾ. ಸಿ.ಎನ್ ಮಂಜುನಾಥ್
ಡಾ. ಸಿ.ಎನ್ ಮಂಜುನಾಥ್   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹೃದ್ರೋಗ ಪುನರ್ವಸತಿ ಕೇಂದ್ರವು ರೋಗಿಗಳ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಸುವಲ್ಲಿ ಯಶಸ್ವಿಯಾಗಿದ್ದು, ಒಂದು ವರ್ಷದೊಳಗೆ ಕೇಂದ್ರದಲ್ಲಿ 1500 ರೋಗಿಗಳಿಗೆಯೋಗ ಥೆರಪಿ ಸೇರಿದಂತೆ ವಿವಿಧ ಸೇವೆಗಳು ದೊರೆತಿವೆ.

ಸಂಸ್ಥೆಯಲ್ಲಿ ನಿತ್ಯ ಸರಾಸರಿ 1,500 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಹೊರರಾಜ್ಯಗಳ ರೋಗಿಗಳೂ ಇಲ್ಲಿ ಚಿಕಿತ್ಸೆ ‍ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ‌.ಪ್ರತಿನಿತ್ಯ ಸರಾಸರಿ 15 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಹೃದಯದಂತಹ ಕಾಯಿಲೆಯಿಂದ ಬಳಲಿ, ಶಸ್ತ್ರಚಿಕಿತ್ಸೆಗೆ ಒಳಗಾದವರು ಸಹಜವಾಗಿಯೇ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುವ ಜತೆಗೆ ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಮೊದಲಿನಂತೆ ಜೀವನಕ್ರಮ ಅಳವಡಿಸಿಕೊಳ್ಳಲು ಹಲವು ದಿನಗಳೇ ಬೇಕಾಗುತ್ತವೆ. ಇನ್ನೂ ಕೆಲವರು ಆಘಾತದಿಂದ ಹೊರಬರಲಾಗದೇ ಮಾನಸಿಕವಾಗಿ ದುರ್ಬಲರಾಗುತ್ತಾರೆ. ಅಂತಹವರಿಗಾಗಿಯೇ ಸಂಸ್ಥೆಯು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿಹೃದ್ರೋಗ ಪುನರ್ವಸತಿ ಕೇಂದ್ರ ಪ್ರಾರಂಭಿಸಿತ್ತು.

ನೀಡಿ ಹಾರ್ಟ್‌ ಫೌಂಡೇಷನ್ ಹಾಗೂ ರೋಟರಿ ಬೆಂಗಳೂರು ಸಹಯೋಗದಲ್ಲಿ ₹ 1.80 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಿಸಿ, ಪ್ರತ್ಯೇಕವಾಗಿ ಸಿಬ್ಬಂದಿ ನೇಮಿಸಲಾಗಿದೆ. ಈ ಕೇಂದ್ರದಲ್ಲಿ ಗುಣಮುಖರಾದವರು ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ ಸೇವೆ ನೀಡಲಾಗುತ್ತಿದೆ.ಕಾರ್ಡಿಯಾಕ್ ಫಿಸಿಯೋಥೆರಪಿ, ಯೋಗ ಥೆರಪಿ, ಆಹಾರ ತಜ್ಞರಿಂದ ಮಾರ್ಗದರ್ಶನದ ಜತೆಗೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ವೈದ್ಯರೊಂದಿಗೆ ಮಾತುಕತೆ ನಡೆಸಿ, ಗೊಂದಲಗಳನ್ನು ನಿವಾರಿಸಿಕೊಳ್ಳಲು ಅವಕಾಶವಿದೆ. ಪ್ರತಿನಿತ್ಯ 40ರಿಂದ 50 ರೋಗಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

ವೈಜ್ಞಾನಿಕವಾಗಿ ಮೇಲ್ವಿಚಾರಣೆ:‘ಬೈಪಾಸ್ ಸರ್ಜರಿ, ಹೃದಯ ಕವಾಟ ಬದಲಾವಣೆ, ಆ್ಯಂಜಿಯೋಪ್ಲ್ಯಾಸ್ಟಿ, ಪೇಸ್‌ ಮೇಕರ್ ಹಾಗೂ ಇತರೆ ಚಿಕಿತ್ಸೆ ಪಡೆದ ರೋಗಿಗಳು ಈ ಕೇಂದ್ರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ರೋಗಿಗಳನ್ನು ಆಸ್ಪತ್ರೆಯಿಂದ ಮೆನೆಗೆ ಕಳುಹಿಸುವ ಮೊದಲು ಅವರಿಗೆ ಆಹಾರ ಪದ್ಧತಿ ಹಾಗೂ ಔಷಧೋಪಚಾರಗಳ ಮಾಹಿತಿ ನೀಡಲಾಗುವುದು.ಹೃದ್ರೋಗಗಳ ಬಗ್ಗೆ ಸಮಗ್ರ ಮಾಹಿತಿ ಇರುವ ಫಲಕಗಳು, ವಿಡಿಯೊಗಳ ಪ್ರದರ್ಶನಗಳು ಸಹ ಇರಲಿವೆ. ದಿನನಿತ್ಯದ ವ್ಯಾಯಾಮ ಪ್ರಕ್ರಿಯೆಗಳ ಬಗ್ಗೆ ವೈಜ್ಞಾನಿಕವಾಗಿ ಪರೀಕ್ಷಿಸಿ ವೈದ್ಯರು ಸಲಹೆ ನೀಡುತ್ತಾರೆ’ ಎಂದುಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

‘ಶಸ್ತ್ರಚಿಕಿತ್ಸೆಯಬಳಿಕವೂ ರೋಗಿಗಳಲ್ಲಿ ಹಲವಾರು ಪ್ರಶ್ನೆಗಳು ಇರುತ್ತವೆ. ಹಾಗಾಗಿ ವೈಜ್ಞಾನಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡುವುದರಿಂದ ಕಾಯಿಲೆಗಳು ಕೂಡಾ ಬೇಗ ಗುಣಮುಖವಾಗುತ್ತವೆ. ಫಿಸಿಯೋಥೆರಪಿಗೆ ಮಾತ್ರ ₹ 100 ದರ ನಿಗದಿಪಡಿಸಿದ್ದೇವೆ. ಉಳಿದ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತೇವೆ’ ಎಂದರು.

ಸ್ತ್ರಚಿಕಿತ್ಸೆಯಿಂದ ಮಾತ್ರ ಕಾಯಿಲೆಗಳು ವಾಸಿಯಾಗುವುದಿಲ್ಲ. ಹಾಗಾಗಿ ಪುನರ್ವಸತಿ ಕೇಂದ್ರ ಪ್ರಾರಂಭಿಸಿ, ಅವರ ಎಲ್ಲ ರೀತಿಯ ಗೊಂದಲಗಳನ್ನು ಪರಿಹರಿಸುತ್ತಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕಡಾ.ಸಿ.ಎನ್. ಮಂಜುನಾಥ್ ಪ್ರತಿಕ್ರಿಯಿಸಿದರು.

ಬೆಂಗಳೂರು ಕೇಂದ್ರದಲ್ಲಿ700 ಹಾಸಿಗೆಗಳಿವೆ. ಪ್ರತಿದಿನ ಸರಾಸರಿ 15 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.