ಪೀಣ್ಯ ದಾಸರಹಳ್ಳಿ: ಡಯಾಲಿಸಿಸ್ ಕೇಂದ್ರ ಪ್ರಾರಂಭಿಸುವುದಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಮಲ್ಲಸಂದ್ರ ವಾರ್ಡ್‌ನ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ಬಿಬಿಎಂಪಿ ಅನುದಾನದಲ್ಲಿ ₹1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಟ್ಟಡ ಪಾಳು ಬಿದ್ದಿದೆ!
ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ಬಡ ಮತ್ತು ಮಧ್ಯಮವರ್ಗದವರ ಅನುಕೂಲಕ್ಕಾಗಿ ಬೆಂಗಳೂರು ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಡಯಾಲಿಸಿಸ್ ಕೇಂದ್ರ ಆರಂಭಿಸಲು ಅನುದಾನ ಬಿಡುಗಡೆಯಾಗಿತ್ತು. ಅದೇ ಅವಧಿಯಲ್ಲಿ ಇಲ್ಲಿಯೂ ಕಟ್ಟಡ ನಿರ್ಮಾಣ ಆರಂಭವಾಯಿತು.
4 ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ ನೆಲ ಹಂತದ ಕಟ್ಟಡ ಪೂರ್ಣಗೊಂಡಿತು. 2020ರ ಆಗಸ್ಟ್ 29ರಂದು ಅಂದಿನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಬಿಎಂಪಿ ಮಹಾಪೌರ ಗೌತಮ್ ಕುಮಾರ್, ಶಾಸಕ ಮಂಜುನಾಥ್, ಪಾಲಿಕೆ ಸದಸ್ಯ ಎನ್. ಲೋಕೇಶ್ ನೇತೃತ್ವದಲ್ಲಿ ಉದ್ಘಾಟನೆಯೂ ಆಯಿತು. ಆದರೆ, ಕಟ್ಟಡದಲ್ಲಿ ಡಯಾಲಿಸ್ ಕೇಂದ್ರ ಆರಂಭವಾಗಲಿಲ್ಲ. ಹೀಗಾಗಿ ಐದು ವರ್ಷಗಳಿಂದ ಕಟ್ಟಡ ಪಾಳುಬಿದ್ದಿದೆ. ನಿತ್ಯ ಮದ್ಯ ಸೇವಿಸುವವರ ತಾಣವಾಗಿದೆ.
ಇಲ್ಲಿ ಡಯಾಲಿಸಿಸ್ ಕೇಂದ್ರ ಆರಂಭವಾದರೆ, ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ಈ ಭಾಗದ ಬಡ ಮತ್ತು ಮಧ್ಯಮವರ್ಗದವರಿಗೆ ತುಂಬಾ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಈಗಲಾದರೂ ಕೇಂದ್ರ ಆರಂಭಿಸಿಲು ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ಎರಡು ತಿಂಗಳೊಳಗೆ ಆರಂಭ’
‘ನೆಫ್ರೊ ಪ್ಲಸ್ ಎಂಬ ಸಂಸ್ಥೆಯವರು ಈ ಕಟ್ಟಡದಲ್ಲಿ ಡಯಾಲಿಸ್ ಕೇಂದ್ರ ಆರಂಭಿಸಲು ಅಗತ್ಯವಾದ ಮೂಲ ಸೌಕರ್ಯಗಳ ಅಂದಾಜು ವೆಚ್ಚದ ಪಟ್ಟಿ ಕೊಟ್ಟಿದ್ದಾರೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀರಿನ ಸೌಲಭ್ಯ ಕಲ್ಪಿಸಿ ಅಗತ್ಯ ಯಂತ್ರಗಳ ಜೊತೆಗೆ 15 ಹಾಸಿಗೆಗಳನ್ನು ಅಳವಡಿಸಲಾಗುತ್ತಿದೆ. ಎರಡು ತಿಂಗಳೊಳಗೆ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಲಾಗುವುದು' ಎಂದು ಬಿಬಿಎಂಪಿ ವೈದ್ಯಾಧಿಕಾರಿ ಸುರೇಂದ್ರ ಎಸ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.