ADVERTISEMENT

ಕುಂದಾಪ್ರ ಭಾಷೆ ಅಧ್ಯಯನ ಪೀಠಕ್ಕೆ ₹50 ಲಕ್ಷ ಬಿಡುಗಡೆ: ಜಯಪ್ರಕಾಶ್‌ ಹೆಗ್ಡೆ

ಕುಂದಾಪ್ರ ಕನ್ನಡ ಹಬ್ಬದ ಸಮಾರೋಪದಲ್ಲಿ ಕೆ. ಜಯಪ್ರಕಾಶ್‌ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 17:38 IST
Last Updated 18 ಆಗಸ್ಟ್ 2024, 17:38 IST
ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿ ರಥೋತ್ಸವ ನಡೆಯಿತು. –ಪ್ರಜಾವಾಣಿ ಚಿತ್ರ
ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿ ರಥೋತ್ಸವ ನಡೆಯಿತು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕುಂದಾಪ್ರ ಭಾಷೆಯ ಅಧ್ಯಯನ ಪೀಠಕ್ಕೆ ರಾಜ್ಯ ಸರ್ಕಾರ ₹ 1.5 ಕೋಟಿ ಮಂಜೂರು ಮಾಡಿದ್ದು, ₹50 ಲಕ್ಷ ಬಿಡುಗಡೆ ಮಾಡಿದೆ. ಒಂದು ವರ್ಷದ ಒಳಗೆ ಅಧ್ಯಯನ ಪೀಠ ಒಂದು ಹಂತಕ್ಕೆ ತರಬೇಕು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ‘ಕುಂದಾಪ್ರ ಕನ್ನಡ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಯನ ಪೀಠಕ್ಕಾಗಿ ಒಂದು ಸಮಿತಿಯಾಗಬೇಕು. ಶಿಕ್ಷಕರ ಸಹಿತ ವಿವಿಧ ರಂಗಗಳಲ್ಲಿ ಕೆಲಸ ಮಾಡಿದವರು ಸಮಿತಿಯಲ್ಲಿರಬೇಕು ಎಂದರು.

ADVERTISEMENT

‘ನಮ್ಮ ಭಾಷೆಯ ಬಗ್ಗೆ ಹೆಚ್ಚು ಪ್ರೀತಿ ಇರಬೇಕು. ಜೊತೆಗೆ ಎಲ್ಲ ಭಾಷೆಯ ಬಗ್ಗೆ ಗೌರವ ಇರಬೇಕು. ಯುವ ಪೀಳಿಗೆಗೆ ಭಾಷೆಯ ಬಗ್ಗೆ ಮಾತ್ರ ಹೇಳಿದರೆ ಸಾಲದು. ಅವರು ದಾರಿತಪ್ಪದಂತೆ ಒಳ್ಳೆಯ ದಾರಿಯನ್ನು ತೋರಬೇಕು. ಉದ್ಯೋಗ ಸಿಗುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಾನು ತುಳು ಭಾಷೆಯ ಪರವಾಗಿಯೂ ಕೆಲಸ ಮಾಡಿದ್ದೇನೆ. ಕುಂದಾಪ್ರ ಕನ್ನಡ ಹಬ್ಬ ನಡೆದ ರೀತಿಯಲ್ಲಿಯೇ ತುಳು ಹಬ್ಬವೂ ನಡೆಯಬೇಕು. ತುಳುಕೂಟಗಳು, ತುಳು ಸಂಘಗಳು ಅಲ್ಲಲ್ಲಿ ಕಾರ್ಯಕ್ರಮಗಳು ಮಾಡುತ್ತಿವೆಯಾದರೂ ಇಷ್ಟು ದೊಡ್ಡಮಟ್ಟದಲ್ಲಿ ನಡೆಯುತ್ತಿಲ್ಲ’ ಎಂದು ಹೇಳಿದರು.

ಅರ್ಜುನ ಪ್ರಶಸ್ತಿ ಪುರಸ್ಕೃತ ಮಾಲತಿ ಹೊಳ್ಳ ಅವರಿಗೆ ಊರ ಗೌರವ ನೀಡಿ ಸನ್ಮಾನಿಸಲಾಯಿತು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಶಾಸಕ ಗುರುರಾಜ್‌ ಗಂಟಿಹೊಳೆ, ಸಿನಿಮಾ ತಾರೆಯರಾದ ಪ್ರಿಯಾಂಕ ಉಪೇಂದ್ರ, ರಾಜ್‌ ಬಿ.ಶೆಟ್ಟಿ, ಪ್ರತಾಪ್‌ ಶೆಟ್ಟಿ, ಉದ್ಯಮಿಗಳಾದ ಕಿಶೋರ್‌ ಕುಮಾರ್‌ ಹೆಗ್ಡೆ ಕೈಲ್ಕೇರಿ, ಗೋವಿಂದ ಬಾಬು ಪೂಜಾರಿ, ಉಪೇಂದ್ರ ಶೆಟ್ಟಿ, ಶಿವರಾಮ ಹೆಗ್ಡೆ, ಅಂಜಲೀನಾ ಭಾಗವಹಿಸಿದ್ದರು.

ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ದೀಪಕ್‌ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್‌, ಕೋಶಾಧಿಕಾರಿ ವಿಜಯ್‌ ಶೆಟ್ಟಿ ಹಾಲಾಡಿ, ಜೊತೆ ಕಾರ್ಯದರ್ಶಿ ಅಜಿತ್‌ ಶೆಟ್ಟಿ ಉಳ್ತೂರು ಕಾರ್ಯಕ್ರಮ ನಡೆಸಿಕೊಟ್ಟರು.

ಶನಿವಾರ ಮತ್ತು ಭಾನುವಾರ ಕುಂದಾಪುರದ ಸಂಸ್ಕೃತಿ ಅನಾವರಣಗೊಂಡಿತು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ‘ಕುಂದಾಪ್ರ ಕನ್ನಡ ಹಬ್ಬ’ದಲ್ಲಿ ಮರಾಠಿ ನಾಯಕ ಸಮುದಾಯದ ನೃತ್ಯ ಪ್ರದರ್ಶನ ನಡೆಯಿತು. –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.