ಬೆಂಗಳೂರು: ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್ ಅನ್ನೇ ಬೇರೆಯವರಿಗೆ ಭೋಗ್ಯಕ್ಕೆ ಕೊಟ್ಟು ₹ 17 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಎಚ್‌ಆರ್‌ಬಿಆರ್ ಲೇಔಟ್ ನಿವಾಸಿ ಕಿರಣ್‌ಕುಮಾರ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ರಂಜನ್ ದವಮಣಿ (40), ಮನೋಹರ್ (45) ಹಾಗೂ ಅವರ ಪತ್ನಿ ಶೀತಲ್ (40) ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಬಾಣಸವಾಡಿ ಪೊಲೀಸರು ತಿಳಿಸಿದರು.
‘ಭೋಗ್ಯಕ್ಕೆ ಮನೆ ಹುಡುಕುತ್ತಿದ್ದ ಕಿರಣ್‌ಕುಮಾರ್, ಓಎಲ್‌ಎಕ್ಸ್ ಜಾಲತಾಣದಲ್ಲಿ ಪ್ರಕಟಿಸಿದ್ದ ಜಾಹೀರಾತು ಆಧರಿಸಿ ಆರೋಪಿಗಳನ್ನು ಸಂಪರ್ಕಿಸಿದ್ದರು. ಪ್ರಭುಶ್ರೀ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿದ್ದ ಗಂಗಾಧರ ಎಂಬುವರ ಮಾಲೀಕತ್ವದ ಫ್ಲ್ಯಾಟ್ ತೋರಿಸಿದ್ದ ಆರೋಪಿಗಳು, ‘ಮಾಲೀಕರ ಒಪ್ಪಿಗೆ ಮೇರೆಗೆ ಫ್ಲ್ಯಾಟ್ ಭೋಗ್ಯಕ್ಕೆ ನೀಡಲಾಗುತ್ತಿದೆ’ ಎಂದಿದ್ದರು. ₹ 17 ಲಕ್ಷಕ್ಕೆ ಮಾತುಕತೆ ಆಗಿತ್ತು’ ಎಂದರು.
‘ಆರೋಪಿಗಳು ನೀಡಿದ್ದ ಖಾತೆಗಳಿಗೆ ದೂರುದಾರ ಕಿರಣ್‌ಕುಮಾರ್, ₹ 17 ಲಕ್ಷ ಹಾಕಿದ್ದರು. ಈ ಬಗ್ಗೆ ಮಾಲೀಕರಿಗೆ ಮಾಹಿತಿ ಇರಲಿಲ್ಲ. ಅವರಿಗೆ ಆರೋಪಿಗಳೇ ಪ್ರತಿ ತಿಂಗಳು ಬಾಡಿಗೆ ಪಾವತಿಸುತ್ತಿದ್ದರು. ಮೂರು ತಿಂಗಳಿನಿಂದ ಬಾಡಿಗೆ ಕಟ್ಟಿರಲಿಲ್ಲ. ಮಾಲೀಕ ಗಂಗಾಧರ ಫ್ಲ್ಯಾಟ್ ಬಳಿ ಬಂದು ವಿಚಾರಿಸಿದ್ದಾಗಲೇ ಕೃತ್ಯ ಬಯಲಾಗಿದೆ’ ಎಂದೂ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.