ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಅಪಹರಣ, ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ 57ನೇ ಸಿಸಿಎಚ್ ನ್ಯಾಯಾಲಯ, ಸೋಮವಾರ (ಅಕ್ಟೋಬರ್ 14) ಆದೇಶ ಪ್ರಕಟಿಸಲಿದೆ.
ಎರಡೂ ಕಡೆಯವರ ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶ ಜೈಶಂಕರ್ ಅವರು ಅ. 14ಕ್ಕೆ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶ ಪ್ರಕಟಿಸುವುದಾಗಿ ಗುರುವಾರ ತಿಳಿಸಿದ್ದರು. ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ ಆಪ್ತರಾದ ಪವಿತ್ರಾಗೌಡ, ರವಿಶಂಕರ್, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಅವರ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದ ಆದೇಶವೂ ಸೋಮವಾರವೇ ಪ್ರಕಟ ಆಗಲಿದೆ.
ಕೊಲೆ ಆರೋಪದ ಅಡಿ ಜೂನ್ 11ರಂದು ದರ್ಶನ್ ಅವರನ್ನು ಬಂಧಿಸಲಾಗಿತ್ತು. ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಪರವಾಗಿ ಸೆಪ್ಟೆಂಬರ್ 21ರಂದು ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಪ್ರಸನ್ನಕುಮಾರ್ ಅವರು ವಾದ ಮಂಡಿಸಿದ್ದರು. ದರ್ಶನ್ ಸೇರಿ ನಾಲ್ವರಿಗೆ ಜಾಮೀನು ಮಂಜೂರು ಮಾಡದಂತೆ ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಹಾಗೂ ಪವಿತ್ರಾ ಗೌಡ ಪರವಾಗಿ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.