ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಹೊಸ ಸಿಮ್‌ ಖರೀದಿಸಿ ತನಿಖೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 23:30 IST
Last Updated 25 ಜೂನ್ 2024, 23:30 IST
<div class="paragraphs"><p>ರೇಣುಕಸ್ವಾಮಿ</p></div>

ರೇಣುಕಸ್ವಾಮಿ

   

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿರುವ ನಟ ದರ್ಶನ್ ಸೇರಿ 17 ಆರೋಪಿಗಳು ಹಾಗೂ ಕೊಲೆಯಾದ ರೇಣುಕಸ್ವಾಮಿ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವ ತನಿಖಾಧಿಕಾರಿಗಳು, ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

ಆಯಾ ಕಂಪನಿಗಳ ಮೂಲಕ ಸಿಮ್‌ಗಳನ್ನು ಮರು ಚಾಲನೆ ಮಾಡಿಸಿರುವ ಪೊಲೀಸರು ಮಹತ್ವದ ಸಾಕ್ಷ್ಯ ಕಲೆಹಾಕಲು ಮುಂದಾಗಿದ್ದಾರೆ.

ADVERTISEMENT

‘ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆರೋಪಿಗಳು, ರೇಣುಕಸ್ವಾಮಿ ಮೊಬೈಲ್ ಅನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದರು. ಅಲ್ಲದೇ ವೆಬ್‌ಆ್ಯಪ್‌ ಬಳಸಿ ಮೊಬೈಲ್‌ನಲ್ಲಿದ್ದ ದತ್ತಾಂಶವನ್ನು ಆರೋಪಿಗಳು ನಿಷ್ಕ್ರಿಯಗೊಳಿಸಿದ್ದರು. ಹೊಸ ಸಿಮ್‌ಕಾರ್ಡ್ ಖರೀದಿಸಿ ತನಿಖೆ ನಡೆಸುತ್ತಿರುವುದರಿಂದ ಆರೋಪಿಗಳು ಕೃತ್ಯ ಎಸಗಿದ ಬಳಿಕ ಯಾರಿಗೆಲ್ಲ ಕರೆ ಮಾಡಿದ್ದರು ಎಂಬುದು ಪತ್ತೆಯಾಗಲಿದೆ’ ಎಂದು ಪೊಲೀಸರು ಹೇಳಿದರು.

ಹಲವರಿಗೆ ಅಶ್ಲೀಲ ಸಂದೇಶ?:

ರೇಣುಕಸ್ವಾಮಿ ಅವರು ಪವಿತ್ರಾಗೌಡ ಅವರಿಗೆ ಮಾತ್ರವಲ್ಲದೇ ಹಲವು ಕಿರುತೆರೆ ನಟಿಯರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಕೆಲವರು ರೇಣುಕಸ್ವಾಮಿ ನಂಬರ್‌ ಅನ್ನು ಬ್ಲಾಕ್ ಮಾಡಿದ್ದರು ಎಂದು ಪೊಲೀಸರು ಹೇಳಿದರು. ‘ಕೊಲೆಯಾದ ವ್ಯಕ್ತಿಯ ಇ-ಮೇಲ್ ಶೋಧಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಅಭಿಮಾನಿಗಳ ಜಮಾವಣೆ:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿಗೆ ಬರುತ್ತಿರುವ ದರ್ಶನ್‌ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ.

ನ್ಯಾಯಾಂಗ ಬಂಧನಲ್ಲಿರುವ ದರ್ಶನ್ ಅವರನ್ನು ನೋಡಲು ಬಂದವರನ್ನು ಕಾರಾಗೃಹಕ್ಕೆ ತೆರಳುವ ಮಾರ್ಗದ ಮಧ್ಯದ ಗೇಟ್‌ನಲ್ಲಿಯೇ ತಡೆದು ವಾಪಸ್‌ ಕಳುಹಿಸಲಾಗುತ್ತಿದೆ.

‘ದರ್ಶನ್ ಅವರನ್ನು ಮಾತನಾಡಿಸಬೇಕು ಎಂದು ಹಲವರು ಬರುತ್ತಿದ್ದಾರೆ. ಕೆಲವರು ದೂರದ ಊರುಗಳಿಂದಲೂ ಬರುತ್ತಿದ್ದಾರೆ. ಯಾರನ್ನೂ ಗೇಟ್‌ನಿಂದ ಮುಂದಕ್ಕೆ ಬಿಡುತ್ತಿಲ್ಲ. ಆರೋಪಿಗಳ ಹತ್ತಿರದ ಸಂಬಂಧಿಕರು ಹಾಗೂ ವಕೀಲರಿಗೆ ಗೇಟ್‌ನಿಂದಕ್ಕೆ ಮುಂದಕ್ಕೆ ತೆರಳಲು ಅವಕಾಶ ನೀಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಜೈಲಿನಲ್ಲಿರುವ ಪವಿತ್ರಾಗೌಡ ಅವರನ್ನು ಮಂಗಳವಾರ ಕುಟುಂಬಸ್ಥರು ಭೇಟಿಯಾದರು. ಪುತ್ರಿ, ಸಹೋದರ ಹಾಗೂ ಪೋಷಕರು ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದರು.

ದೋಷಾರೋಪ ಪಟ್ಟಿ ಶೀಘ್ರ:

ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಶೀಘ್ರದಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ  ಎಂದು ಗೊತ್ತಾಗಿದೆ.

‘ತನಿಖೆ ಬಹುತೇಕ ಪೂರ್ಣಗೊಂಡಿದ್ದು ಸಾಕ್ಷ್ಯಾಧಾರ ಕಲೆ ಹಾಕಲಾಗಿದೆ. ಎಫ್‌ಎಸ್‌ಎಲ್‌ ವರದಿ ಕೆಲವು ದಿನಗಳಲ್ಲಿ ಬರಲಿದೆ. ಆ ವರದಿ ಬಂದ ಬಳಿಕ ಆರೋಪ ಪಟ್ಟಿ ಸಲ್ಲಿಸುತ್ತೇವೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.