ADVERTISEMENT

ಕೊಲೆ ಪ್ರಕರಣ | ದರ್ಶನ್‌ ವಿರುದ್ಧ ಸಾಂದರ್ಭಿಕ ಸಾಕ್ಷ್ಯ ಸೃಷ್ಟಿ: ವಕೀಲರ ವಾದ

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 16:11 IST
Last Updated 4 ಅಕ್ಟೋಬರ್ 2024, 16:11 IST
ದರ್ಶನ್‌
ದರ್ಶನ್‌   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಶುಕ್ರವಾರ ನಡೆಯಿತು.

‘ದರ್ಶನ್ ಅವರ ವಿರುದ್ಧ ಪ್ರಕರಣ ದಾಖಲಾದ್ದರಿಂದ ಮಾಧ್ಯಮಗಳೇ ವಿಚಾರಣೆ ನಡೆಸಿವೆ. ಅದರಿಂದ ಜಾಮೀನು ನಿರ್ಧಾರ ಆಗದು ಎಂದು ನಂಬಿದ್ದೇನೆ. ದರ್ಶನ್‌ ವಿರುದ್ಧ ಸಾಂದರ್ಭಿಕ ಸಾಕ್ಷ್ಯ ಸೃಷ್ಟಿಸಲಾಗಿದೆ’ ಎಂದು ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್ ವಾದಿಸಿದರು.

‘ತನಿಖಾಧಿಕಾರಿಗಳು ಅತ್ಯುತ್ತಮವಾಗಿ ತನಿಖೆ ನಡೆಸಿದ್ದಾರೆಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಕೋರ್ಟ್‌ಗೆ ತಿಳಿಸಿದ್ದಾರೆ. ಆದರೆ, ನನ್ನ ಪ್ರಕಾರ ಇದು ಕಳಪೆ ತನಿಖೆಯಾಗಿದೆ. ಮೃತದೇಹದ ಮೇಲೆ ನಾಯಿ ಕಚ್ಚಿದ ಗುರುತುಗಳಿವೆ. ಇದನ್ನೇ ಹಲ್ಲೆ ಎಂದು ಮಾಧ್ಯಮಗಳು ಬಿಂಬಿಸಿವೆ’ ಎಂದು ವಾದ ಮಂಡಿಸಿದರು.

ADVERTISEMENT

‘ದೋಷಾರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಗೂ ಮುನ್ನವೇ ಕೆಲವು ಅಂಶಗಳು ಸೋರಿಕೆಯಾಗಿವೆ. ಹೀಗಾಗಿ, ಕೋರ್ಟ್‌ ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕು’ ಎಂದು ಕೋರಿದರು.

‘ಕೃತ್ಯ ನಡೆದಿದೆ ಎನ್ನಲಾದ ಸ್ಥಳದಲ್ಲಿ ನೈಲಾನ್ ಹಗ್ಗದ ತುಂಡು , ಮರದ ಕೊಂಬೆ, ಸ್ಟೋನಿ ಬ್ರೂಕ್ ಪಬ್ ಹೆಸರಿನ ನೀರಿನ ಬಾಟಲಿಯನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಕೃತ್ಯದ ಸ್ಥಳದಲ್ಲಿ ಸಿಕ್ಕಿದ ಎಲ್ಲ ವಸ್ತುಗಳನ್ನು ಸಾಕ್ಷಿಯಾಗಿ ಜೂನ್‌ 12ರಂದೇ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ವಾಸ್ತವದಲ್ಲಿ ಜೂನ್‌ 9ರಂದೇ ಈ ಎಲ್ಲ ವಸ್ತುಗಳು ಪೊಲೀಸರ ಬಳಿಯಿದ್ದವು. ಟಾರ್ಚ್ ಬೆಳಕಿನಲ್ಲಿ ಪಂಚನಾಮೆ ನಡೆಸಲಾಗಿದೆ. ಹೀಗಾಗಿ, ತನಿಖಾಧಿಕಾರಿಗಳು ಉಲ್ಲೇಖಿಸಿರುವ ಅಂಶಗಳನ್ನು ನಂಬುವಂತಿಲ್ಲ’ ಎಂದು ನಾಗೇಶ್‌ ಹೇಳಿದರು.

‘ದರ್ಶನ್‌ ನೀಡಿದ್ದ ಸ್ವ–ಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಹಾಕಿದ್ದಾಗಿ ತಿಳಿಸಿದ್ದರು. ಆದರೆ, ಪತ್ನಿಮನೆಯಲ್ಲಿ ದರ್ಶನ್ ಅವರ ಶೂಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕೃತ್ಯ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆ ಜಪ್ತಿ ಮಾಡಿಕೊಂಡಿದ್ದರು. ಅದರಲ್ಲಿ ರೇಣುಕಾಸ್ವಾಮಿ ರಕ್ತದ ಕಲೆಯ ಗುರುತು ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಬಟ್ಟೆ ತೊಳೆದು ಒಣಗಿಸಿದ್ದರೂ ರಕ್ತದ ಕಲೆ ಉಳಿದಿದೆ ಎಂದು ಉಲ್ಲೇಖಿಸಲಾಗಿದೆ. ತೊಳೆದ ಮೇಲೆ ರಕ್ತದ ಕಲೆ ಉಳಿದಿದೆ ಎಂಬ ಮಾತು ನಂಬಲಸಾಧ್ಯ’ ಎಂಬ ವಾದ ಮುಂದಿಟ್ಟರು.

ವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು. ಶನಿವಾರ ಪವಿತ್ರಾಗೌಡ, ಇತರೆ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.