ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್, ‘ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದು ಅದಕ್ಕಾಗಿ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಕೋರಿ ವೈದ್ಯಕೀಯ ನೆರವಿನ ತಳಹದಿಯಲ್ಲಿ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದ್ದು ನಾಳೆ (ಅ. 30) ಪ್ರಕಟಿಸಲಿದೆ.
ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ತೂಗುದೀಪ ಶ್ರೀನಿವಾಸ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ‘ದರ್ಶನ್ ಕಳೆದ ಎರಡು ವರ್ಷಷಗಳಿಂದ ಬೆನ್ನುಹುರಿ ಸಮಸ್ಯೆ ಎದುರಿಸುತ್ತಿದ್ದಾರೆ. ಅದೀಗ ಉಲ್ಬಣಗೊಂಡಿದೆ. ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸದೇ ಹೋದರೆ ಕಿಡ್ನಿ ತೊಂದರೆ ಕಾಣಿಸಿಕೊಳ್ಳಬಹುದು ಅಥವಾ ನರಗಳ ದೌರ್ಬಲ್ಯದಿಂದಾಗಿ ಪಾರ್ಶ್ವವಾಯುವಿಗೆ (ಲಕ್ವ) ತುತ್ತಾಗುವ ಅಪಾಯವಿರುತ್ತದೆ. ಹಾಗಾಗಿ, ಅವರು ಈ ಮೊದಲು ಚಿಕಿತ್ಸೆ ಪಡೆದಿದ್ದ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲು ಮಧ್ಯಂತರ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.
‘ದರ್ಶನ್ ಈಗಾಗಲೇ ಎರಡು ಬಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಾದ ಅಪೊಲೊದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈಗಲೂ ಅವರು ಅಲ್ಲಿಯೇ ತಮ್ಮದೇ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವುದರಿಂದ ಪ್ರಾಸಿಕ್ಯೂಷನ್ ಸಾಕ್ಷಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ನ್ಯಾಯಾಲಯ ಯಾವುದೇ ಷರತ್ತು ವಿಧಿಸಿದರೂ ಅರ್ಜಿದಾರರು ಅದಕ್ಕೆ ಬದ್ಧವಾಗಿರುತ್ತಾರೆ. ಆದ್ದರಿಂದ, ಮೂರು ತಿಂಗಳು ಮಧ್ಯಂತರ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.
'ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯಲು ಆಗುವುದಿಲ್ಲ. ಏನಾದರೂ ಎಡವಟ್ಟು ಆದರೆ ಏನು ಮಾಡುವುದು, ಅವರ ಈ ಸಮಸ್ಯೆ 2022ರಿಂದಲೂ ಮುಂದುವರಿದಿದೆ. ಈಗಂತೂ ನರಗಳ ಉಬ್ಬುವಿಕೆಯಿಂದಾಗಿ ಸರಿಯಾಗಿ ಕೂರಲು ಆಗದೆ, ಏಳಲೂ ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗಿದ್ದರೆ ಮಾತ್ರವೇ ಪ್ರಕರಣದ ವಿಚಾರಣೆಯನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯ’ ಎಂದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, ‘ನ್ಯಾಯಾಲಯವು ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ರಚಿಸಿ, ಅವರು ನೀಡುವ ವರದಿಯನ್ನು ಆಧರಿಸಿ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು’ ಎಂದು ಬಲವಾಗಿ ವಾದ ಮಂಡಿಸಿದರು.
‘ದರ್ಶನ್ ಅವರು ಬೆಂಗಳೂರಿಗೆ ಬಂದು ಇಲ್ಲಿನ ಅಧಿಕೃತ ವೈದ್ಯಕೀಯ ಮಂಡಳಿಯ ತಜ್ಞರ ಮುಂದೆ ತಪಾಸಣೆಗೆ ಒಳಗಾಗಲಿ. ಅವರು ಯಾವೆಲ್ಲಾ ಚಿಕಿತ್ಸೆ, ಎಷ್ಟು ದಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹೇಗೆ ಇತ್ಯಾದಿ ಅಗತ್ಯಗಳ ಸವಿವರ ವರದಿ ನೀಡಲಿ. ಈ ಸಂಬಂಧ ಎರಡನೇ ಅಭಿಪ್ರಾಯ ಪಡೆಯಲಿ. ಮಂಡಳಿ ನೀಡುವ ವರದಿಯನ್ನು ಆಧರಿಸಿ ನ್ಯಾಯಾಲಯ ಮಂದಿನ ನಿರ್ಧಾರ ಕೈಗೊಳ್ಳಬೇಕು’ ಎಂದು ಪ್ರತಿಪಾದಿಸಿದರು.
ಆದರೆ ನಾಗೇಶ್ ಈ ವಾದಾಂಶವನ್ನು ಒಪ್ಪದೆ, ‘ಅರ್ಜಿದಾರರು ಈ ಮೊದಲಿಗೆ ಮೈಸೂರಿನಲ್ಲಿಯೇ ಚಿಕಿತ್ಸೆ ಪಡೆದಿರುವ ಕಾರಣ ಅಲ್ಲಿಯೇ ಶಸ್ತ್ರಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು’ ಎಂದು ಕೋರಿದರು. ವಾದ–ಪ್ರತಿವಾದ ಅಲಿಸಿದ ನ್ಯಾಯಪೀಠ ಆದೇಶವನ್ನು ಬುಧವಾರ (ಅ.30) ಪ್ರಕಟಿಸಲಾಗುವುದು ಎಂದು ತಿಳಿಸಿತು.
ದರ್ಶನ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮೆಡಿಕಲ್ ಕಾಲೇಜಿನ ನರಶಸ್ತ್ರ ಚಿಕಿತ್ಸಕ ವಿಭಾಗದ ಪ್ರೊಫೆಸರ್ ಮತ್ತು ಎಚ್‌ಒಡಿಯೂ ಆದ ಎಸ್.ವಿಶ್ವನಾಥ್ ಅವರ ಸಹಿ ಹೊಂದಿದ 26 ದಾಖಲೆಗಳ ದೃಢೀಕೃತ ದಾಖಲೆಯಲ್ಲಿ ಇರುವ ಮುಖ್ಯಾಂಶಗಳು.
ಫಿಜಿಯೊಥೆರಪಿ, ನೋವು ನಿವಾರಕ, ನರದ ಉಪಚಾರಕ್ಕೆ ಔಷಧ ತೆಗೆದುಕೊಳ್ಳುವುದು, ಲಂಬಾರ್ ಬ್ರೇಸ್ ( ಸೊಂಟಕ್ಕೆ ಕಟ್ಟುವ ಪಟ್ಟಿ) ಉಪಯೋಗಿಸುವುದು.
ಈ ದಿಸೆಯಲ್ಲಿ ರೋಗಿಗೆ ಉಪಚಾರ ನೀಡಿದ ನಂತರ ಸ್ವಲ್ಪಮಟ್ಟಿಗೆ ನೋವು ನಿವಾರಣೆಯಾಗಿದೆ.
ರೋಗಿಯ ತಪಾಸಣೆ ಮತ್ತು ಸ್ಕ್ಯಾನ್ ವಿವರಗಳನ್ನು ಪರಿಶೀಲಿಸಿದಾಗ ನರದ ತೊಂದರೆಯಿಂದಾಗಿ ಕಾಲಿನ ಪಾದಗಳಲ್ಲಿ ಅಲ್ಪಪ್ರಮಾಣದಲ್ಲಿ ಸ್ಪರ್ಶ ಮತ್ತು ಶಕ್ತಿ ಕಡಿಮೆಯಾಗಿರುತ್ತದೆ.
ಇದನ್ನು ಗಮನದಲ್ಲಿ ಇರಿಸಿಕೊಂಡು ಹೇಳುವುದಾದರೆ ಕೆಲಮೊಮ್ಮೆ ಮುಂದೆ ಆಗುವ ಎರಡೂ ಪಾದಗಳ ಬಲಹೀನತೆಗೆ ಈಡಾಗುವುದು ಅಥವಾ ಮೂತ್ರ ವಿಸರ್ಜನೆ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಇರುತ್ತದೆ. ಇದರಿಂದ ರೋಗಿಯನ್ನು ಪಾರು ಮಾಡಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ.
ಈ ಶಸ್ತ್ರಚಿಕಿತ್ಸೆಯನ್ನು ಕರ್ನಾಟಕ ಸರ್ಕಾರದ ಎಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾಡಬಹುದು.
ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ (ವಿಮ್ಸ್–ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ನ್ಯೂರೊ ನ್ಯಾವಿಗೇಷನ್ ಉಪಕರಣ ಲಭ್ಯವಿರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.