ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆಯ ಆರಂಭದಲ್ಲಿ ಎದುರಾದ ಹಲವು ಸವಾಲುಗಳನ್ನು ಪೊಲೀಸರು ಹಿಮ್ಮೆಟ್ಟಿಸಿ, ಚಿತ್ರನಟ ದರ್ಶನ್ ಮತ್ತು ಅವರ ಪ್ರೇಯಸಿ ಪವಿತ್ರಾ ಗೌಡ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಪತ್ತಹೆಚ್ಚಿದ ರೋಚಕ ಕಥನ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿದೆ.
ತೀವ್ರ ಹಲ್ಲೆಯಿಂದ ರೇಣುಕಸ್ವಾಮಿ ಮೃತಪಟ್ಟಿದ್ದರಿಂದ ಆಘಾತಕ್ಕೆ ಒಳಗಾದ ಆರೋಪಿಗಳು ನಾಲ್ವರನ್ನು ಶರಣಾಗುವಂತೆ ಯೋಜನೆ ರೂಪಿಸುತ್ತಾರೆ. ನಿಖಿಲ್ ನಾಯಕ್, ಕಾರ್ತಿಕ್, ಕೇಶವಮೂರ್ತಿ ಹಾಗೂ ರಾಘವೇಂದ್ರ ಶರಣಾಗುತ್ತಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಆರಂಭದಲ್ಲಿ ತಪ್ಪೊಪ್ಪಿಕೊಂಡಿರುತ್ತಾರೆ. ಆರಂಭದಲ್ಲಿ ಪೊಲೀಸರೂ ರೌಡಿಶೀಟರ್ ಹತ್ಯೆ ನಡೆದಿರಬಹುದು ಎಂದೇ ಭಾವಿಸಿರುತ್ತಾರೆ.
ಆರೋಪಿಗಳ ಹೇಳಿಕೆಯಲ್ಲಿ ಗೊಂದಲ ಇದ್ದುದ್ದರಿಂದ ಸಂಶಯಗೊಂಡ ಡಿಸಿಪಿ ಎಸ್.ಗಿರೀಶ್ ಹಾಗೂ ಎಸಿಪಿ ಚಂದನ್ ಕುಮಾರ್ ಅವರು ತೀವ್ರ ವಿಚಾರಣೆ ನಡೆಸುತ್ತಾರೆ. ಆಗ, ‘ದರ್ಶನ್ ಅವರ ಪತ್ನಿಗೆ ಸಂದೇಶ ಕಳುಹಿಸಿದ್ದಕ್ಕೆ ಕೊಲೆ ಮಾಡಲಾಗಿದೆ’ ಎಂದು ರಾಘವೇಂದ್ರ ಬಾಯ್ಬಿಡುತ್ತಾರೆ. ನಂತರ, ಇತರೆ ಮೂವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ವಿಚಾರಣೆ ನಡೆಸಿದಾಗ, ದರ್ಶನ್ ಅವರ ಪ್ರೇಯಸಿ ಪವಿತ್ರಾಗೌಡ ಅವರಿಗೆ ಸಂದೇಶ ಕಳುಹಿಸಿದ್ದಕ್ಕೆ ಕೃತ್ಯ ಎಸಗಿರುವುದಾಗಿ ಕೇಶವಮೂರ್ತಿ ಹೇಳುತ್ತಾರೆ. ಆಗ ಕೃತ್ಯ ಬಯಲಾಗುತ್ತದೆ.
ರಾಘವೇಂದ್ರನ ಹಿನ್ನೆಲೆ ಕೆದಕಿದಾಗ, ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂಬುದು ಗೊತ್ತಾಗುತ್ತದೆ.
‘ಚಿತ್ರದುರ್ಗದಿಂದ ಶೆಡ್‌ಗೆ ಕರೆದೊಯ್ದು ‘ಡಿ–ಬಾಸ್’ ಸೇರಿ ಎಲ್ಲರೂ ಹೊಡೆದೆವು’ ಎಂದು ತಪ್ಪೊಪ್ಪಿಕೊಳ್ಳುತ್ತಾರೆ. ಆಗ ಎಚ್ಚರಿಕೆಯ ಹೆಜ್ಜೆ ಇರಿಸಿದ ಪೊಲೀಸರು, ಎಲ್ಲರ ಮೊಬೈಲ್ ನೆಟ್‌ವರ್ಕ್ ಲೊಕೇಷನ್ ಪರಿಶೀಲಿಸುತ್ತಾರೆ. ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಒಂದೇ ಸ್ಥಳದಲ್ಲಿ ಇರುವುದು ಪತ್ತೆಯಾಗುತ್ತದೆ.
ಜೂನ್ 11ರಂದು ನಸುಕಿನಲ್ಲಿ ಎಸಿಪಿ ಚಂದನ್ ಕುಮಾರ್ ಅವರು, ಡಿಸಿಪಿ ಗಿರೀಶ್ ಅವರಿಗೆ ಕರೆ ಮಾಡಿ, ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನದ ಬಗ್ಗೆ ಮಾಹಿತಿ ನೀಡುತ್ತಾರೆ. ಬಂಧನಕ್ಕೆ ಅನುಮತಿ ಕೇಳುತ್ತಾರೆ. ಆಗಲೇ ಬಂಧನಕ್ಕೆ ಸೂಚನೆ ನೀಡಿದ ಡಿಸಿಪಿ, ‘ತಕ್ಷಣವೇ ಮೈಸೂರಿಗೆ ಹೊರಡಿ’ ಎನ್ನುತ್ತಾರೆ.
ದರ್ಶನ್ ಅವರು ಪತ್ನಿ ಮನೆಯಲ್ಲಿ ಪೂಜಾ ಕಾರ್ಯ ಮುಗಿಸಿಕೊಂಡು ಮೈಸೂರಿನ ಫಾರ್ಮ್ ಹೌಸ್‌ಗೆ ತೆರಳಿದ್ದರು. ಅಲ್ಲಿಂದ ಚಿತ್ರೀಕರಣದ ಸ್ಥಳಕ್ಕೆ ಹೋಗಿದ್ದರು. ಕೊಲೆ ಮಾಹಿತಿ ಬೆನ್ನಲ್ಲೇ ಎಸಿಪಿ ಚಂದನ್ ತಂಡ, ಮೈಸೂರಿಗೆ ತೆರಳಿತ್ತು. ಜಿಮ್‌ನಲ್ಲಿ ದೈಹಿಕ ಕಸರತ್ತು ನಡೆಸುತ್ತಿದ್ದ ವೇಳೆಯೇ ದರ್ಶನ್ ಅವರನ್ನು ವಶಕ್ಕೆ ಪಡೆದಿತ್ತು. ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.