ADVERTISEMENT

ಕೊಲೆ ಪ್ರಕರಣ | ದರ್ಶನ್‌ಗೆ ಮಧ್ಯಂತರ ಜಾಮೀನು: ಮೇಲ್ಮನವಿಗೆ ಪೊಲೀಸರ ಚಿಂತನೆ

ಪ್ರಕರಣದ ತನಿಖಾಧಿಕಾರಿಗಳ ಜತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 15:38 IST
Last Updated 31 ಅಕ್ಟೋಬರ್ 2024, 15:38 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್‌ ಅವರಿಗೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ವೈದ್ಯಕೀಯ ಚಿಕಿತ್ಸೆ ಪಡೆಯಲು ಹೈಕೋರ್ಟ್‌ ಆರು ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ದರ್ಶನ್‌ ಅವರು ಬಳ್ಳಾರಿ ಜೈಲಿನಿಂದ ಬುಧವಾರ ಸಂಜೆ ಬಿಡುಗಡೆ ಆಗಿದ್ದರು. ಮಧ್ಯಂತರ ಜಾಮೀನು ಲಭಿಸಿದ ಬೆನ್ನಲ್ಲೇ ಬುಧವಾರ ಸಂಜೆ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿಗಳ ಸಭೆ ನಡೆದಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

‘ಹೈಕೋರ್ಟ್‌ನ ಆದೇಶದ ಪೂರ್ಣಪ್ರತಿ ಇನ್ನೂ ಸಿಕ್ಕಿಲ್ಲ. ಆದೇಶದ ಪ್ರತಿ ಸಿಕ್ಕಿದ ಬಳಿಕ ಕಾನೂನು ತಜ್ಞರ ಜತೆಗೆ ಚರ್ಚೆ ನಡೆಸಲಾಗುವುದು. ಸೋಮವಾರ ಮತ್ತೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹೊಸಕೆರೆಹಳ್ಳಿ ಫ್ಲ್ಯಾಟ್‌ನಲ್ಲಿ ವಾಸ್ತವ್ಯ: ಬಳ್ಳಾರಿ ಕಾರಾಗೃಹದಿಂದ ಬುಧವಾರ ಸಂಜೆ ಬಿಡುಗಡೆಯಾದ ದರ್ಶನ್‌ ಅವರು ತಡರಾತ್ರಿ ಬೆಂಗಳೂರು ತಲುಪಿದರು. ಹೊಸಕೆರೆಹಳ್ಳಿಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ವಾಸ್ತವ್ಯ ಮಾಡಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಆಸ್ಪತ್ರೆಗೆ ದಾಖಲಾಗುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಅವರು ಹೊರಗೆ ಕಾಣಿಸಿಕೊಳ್ಳಲಿಲ್ಲ. ದರ್ಶನ್‌ ಅವರು ಶುಕ್ರವಾರ ಅಥವಾ ಸೋಮವಾರ ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ದೃಷ್ಟಿಯಿಂದ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್ ಎದುರು ಪೊಲೀಸರನ್ನು ನಿಯೋಜಿಸಲಾಗಿದ್ದು, ಅಲ್ಲಿಗೆ ಬಂದು ಅಭಿಮಾನಿಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ.

ಲಕ್ಷ್ಮಿ ಪೂಜೆ: ದರ್ಶನ್ ಅವರ ಕಾರುಗಳನ್ನು ರಾಜರಾಜೇಶ್ವರಿ ನಗರದ ನಿವಾಸದಿಂದ ಹೊಸಕೆರೆಹಳ್ಳಿ ನಿವಾಸಕ್ಕೆ ತಂದು ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಬಳಿಕ ಎಲ್ಲ ಕಾರುಗಳನ್ನೂ ರಾಜರಾಜೇಶ್ವರಿ ನಿವಾಸದ ಬಳಿಯ ಶೆಡ್‌ಗೆ ಕೊಂಡೊಯ್ಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.