ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಸ್ನೇಹಿತೆ ಸಮತಾ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:19 IST
Last Updated 15 ಜುಲೈ 2024, 15:19 IST
<div class="paragraphs"><p>ರೇಣುಕಸ್ವಾಮಿ</p></div>

ರೇಣುಕಸ್ವಾಮಿ

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯೊಬ್ಬನಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ಅವರಿಂದ ಎಸ್‌ಐಟಿ ಅಧಿಕಾರಿಗಳು ಹೇಳಿಕೆ ಪಡೆದರು.

ಆರೋಪಿ ಧನರಾಜ್‌ಗೆ ₹3 ಸಾವಿರ ಗೂಗಲ್ ಪೇ ಮಾಡಿರುವ ಕುರಿತು ಹೇಳಿಕೆ ನೀಡಿದ ಸಮತಾ ಅವರು, ಆರೋಪಿಗೆ ಈ ಹಿಂದೆ ನೀಡಿದ್ದ ಹಣದ ಬಗ್ಗೆ ದಾಖಲೆಯನ್ನು ಸಹ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. 

ADVERTISEMENT

‘ಧನರಾಜ್‌ ಪರಿಚಯ ಮೊದಲಿನಿಂದಲೂ ಇತ್ತು. ಆತನಿಗೆ ಹಣಕಾಸಿನ ಅಗತ್ಯವಿದ್ದಾಗ ಕೇಳಿ ಪಡೆದು, ವಾಪಸ್ ನೀಡುತ್ತಿದ್ದ.  ಅದೇ ರೀತಿ ₹3 ಸಾವಿರ ಕೇಳಿದ್ದರಿಂದ ಕೊಟ್ಟಿದ್ದೆ. ಆದರೆ, ರೇಣುಕಸ್ವಾಮಿ ಕೊಲೆ ಬಗ್ಗೆ ಆತ ನನಗೆ ಏನೂ ಹೇಳಿಲ್ಲ’ ಎಂದು ಸಮತಾ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರೇಣುಕಸ್ವಾಮಿ ಅವರಿಗೆ ವಿದ್ಯುತ್ ಶಾಕ್ ನೀಡಲು ಬಳಸಿದ್ದ ‘ಎಲೆಕ್ಟ್ರಿಕ್ ಶಾಕ್ ಟಾರ್ಚ್‌’ ಆರೋಪಿ ಧನರಾಜ್ ಅಲಿಯಾಸ್ ರಾಜನ ಬಳಿ ಇತ್ತು. ಅವರಿಂದ ಪಡೆದ ಹಣದಿಂದಲೇ ಉಪಕರಣ ಖರೀದಿಸಿರುವ ಸಾಧ್ಯತೆ ಇರಬಹುದು. ಹಾಗಾಗಿ ಅವರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಭೇಟಿ: ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವರ ತಂದೆ ಪುಟ್ಟಣ್ಣ, ತಾಯಿ ಶೋಭಾ ಮತ್ತು ಮಗಳು ಭೇಟಿ ಮಾಡಿ, ಕೆಲವು ನಿಮಿಷ ಮಾತುಕತೆ ನಡೆಸಿದರು.

‘ಕಡಿಮೆ ರಕ್ತದೊತ್ತಡ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವ ಪವಿತ್ರಾ, ಜೈಲಿನ ಊಟವನ್ನು ಸರಿಯಾಗಿ ಮಾಡುತ್ತಿಲ್ಲ.  ಆರೋಗ್ಯ ತಪಾಸಣೆ ಮಾಡಿಸಿದ್ದು, ವೈದ್ಯರು ಹಣ್ಣುಗಳನ್ನು ಹೆಚ್ಚು ಸೇವಿಸುವಂತೆ ಸಲಹೆ ನೀಡಿದ್ದಾರೆ’ ಎಂದು ಜೈಲು ಮೂಲಗಳು ತಿಳಿಸಿವೆ.

ಯೋಗ, ಧ್ಯಾನ:

ಕೊಲೆ ಪ್ರಕರಣದಲ್ಲಿ 23 ದಿನಗಳಿಂದ ಜೈಲಿನಲ್ಲಿರುವ ದರ್ಶನ್ ತೂಗುದೀಪ ಶ್ರೀನಿವಾಸ್ ಅವರು ಖಿನ್ನತೆಯಿಂದ ಹೊರ ಬರಲು ಧ್ಯಾನ, ಯೋಗದ ಮೊರೆ ಹೋಗಿದ್ದಾರೆ. ನಿತ್ಯ ಬೆಳಿಗ್ಗೆ ಎದ್ದು ಕೆಲ ಹೊತ್ತು ಧ್ಯಾನ ಮತ್ತು ಯೋಗಾಭ್ಯಾಸ ಮಾಡುತ್ತಾರೆ. ಕೆಲ ದಿನಗಳಿಂದ ಪುಸ್ತಕಗಳನ್ನು ಓದುವುದನ್ನು ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.