ADVERTISEMENT

ದರ್ಶನ್‌ಗೆ ಶಸ್ತ್ರಚಿಕಿತ್ಸೆ: ಇಂದು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 0:10 IST
Last Updated 4 ನವೆಂಬರ್ 2024, 0:10 IST
ದರ್ಶನ್
ದರ್ಶನ್   

ಬೆಂಗಳೂರು: ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಕೆಂಗೇರಿಯ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ದಾಖಲಾಗಿರುವ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ, ನಟ ದರ್ಶನ್‌ ಅವರಿಗೆ ಎಂಆರ್‌ಐ, ಎಕ್ಸ್‌ರೇ ಹಾಗೂ ರಕ್ತ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷಾ ವರದಿ ಬಂದ ಬಳಿಕ ವೈದ್ಯರು ಚಿಕಿತ್ಸೆಯ ಸ್ವರೂಪವನ್ನು ನಿರ್ಧರಿಸಲಿದ್ದಾರೆ.

ನರರೋಗ ತಜ್ಞ ಡಾ.ನವೀನ್ ಅಪ್ಪಾಜಿಗೌಡ ನೇತೃತ್ವದ ತಂಡ ಶುಕ್ರವಾರ ದರ್ಶನ್‌ ಅವರ ಆರೋಗ್ಯ ತಪಾಸಣೆ ನಡೆಸಿದ ವೇಳೆ ಅವರ ಎಡಗಾಲಿನ ಸ್ಪರ್ಶ ಸಂವೇದನೆ ಕಡಿಮೆ ಇತ್ತು. ಹಾಗಾಗಿ ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಿ, ನೋವು ನಿವಾರಕ ಔಷಧಗಳನ್ನು ನೀಡಲಾಗುತ್ತಿದೆ.

‘ಪರೀಕ್ಷಾ ವರದಿಗಳು ಸೋಮವಾರ ಕೈಸೇರಲಿದ್ದು, ಬಳಿಕ ಶಸ್ತ್ರಚಿಕಿತ್ಸೆ ಮಾಡಬೇಕಾ ಅಥವಾ ಫಿಸಿಯೋಥೆರಪಿ ಚಿಕಿತ್ಸೆಯಿಂದ ಗುಣಪಡಿಸಬಹುದೇ ಎಂಬುದನ್ನು ನಿರ್ಧರಿಸಲಾಗುವುದು. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಲಾಗುವುದು’ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ದರ್ಶನ್ ಭೇಟಿಗೆ ಬಂದು ಹೋಗುವವರ ಬಗ್ಗೆ ಪೊಲೀಸರು ದಾಖಲಾತಿ ಪುಸ್ತಕ ಪರಿಶೀಲನೆ ನಡೆಸುತ್ತಿದ್ದಾರೆ. ಅವರ ಕುಟುಂಬದವರು, ಆಪ್ತರು ಮತ್ತು ವಕೀಲರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ನ್ಯಾಯಾಲಯ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.