ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ; ಅಂತಿಮ ಘಟ್ಟಕ್ಕೆ ತನಿಖೆ: ಕಮಿಷನರ್‌ ಬಿ. ದಯಾನಂದ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 14:39 IST
Last Updated 16 ಆಗಸ್ಟ್ 2024, 14:39 IST
ರೇಣುಕಾಸ್ವಾಮಿ
ರೇಣುಕಾಸ್ವಾಮಿ   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ತನಿಖೆ ಅಂತಿಮ ಘಟ್ಟ ತಲುಪಿದ್ದು, ಶೀಘ್ರದಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್‌ ಬಿ. ದಯಾನಂದ ಹೇಳಿದರು.

‘ಪ್ರಕರಣಕ್ಕೆ ಸಂಬಂಧಿಸಿದ ಮೌಖಿಕ, ಸಾಂದರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರು ಮತ್ತು ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯ (ಎಸ್‌ಎಫ್‌ಎಲ್)ಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಶೇಕಡ 70ರಷ್ಟು ಪರೀಕ್ಷಾ ವರದಿಗಳು ಕೈಸೇರಿವೆ. ಉಳಿದ ವರದಿಗಳು ಕೆಲವೇ ದಿನಗಳಲ್ಲಿ ಬರುವ ಸಾಧ್ಯತೆಯಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್​ಎಸ್​ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿಗಳು ಬರಬೇಕಿದೆ. ಎಲ್ಲ ವರದಿಗಳು ಬಂದ ಬಳಿಕ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆಯಲಾಗುವುದು. ಬಳಿಕ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದರು.

ADVERTISEMENT

ರೇಣುಕಸ್ವಾಮಿ ಅವರ ಕೊಲೆ ನಡೆದ ಸ್ಥಳ, ಮೃತದೇಹ ಎಸೆದ ಕಾಲುವೆ ಬಳಿ ಹಾಗೂ ಆರೋಪಿಗಳ ಮನೆಗಳಲ್ಲಿ ಎಫ್‌ಎಸ್‌ಎಲ್‌ ತಜ್ಞರು ಹಲವು ಮಾದರಿ ಸಂಗ್ರಹಿಸಿದ್ದರು. ಆರೋಪಿಗಳ ಮೊಬೈಲ್ ಹಾಗೂ ಸಿ.ಸಿ.ಟಿ.ವಿ ಡಿವಿಆರ್‌ನಿಂದ ಅಳಿಸಿ ಹಾಕಿದ್ದ ದತ್ತಾಂಶವನ್ನು ಮರು ಸಂಗ್ರಹಿಸಲಾಗಿದೆ. ಎಲ್ಲವನ್ನೂ ಪರೀಕ್ಷಿಸಿ, ವರದಿ ಪಡೆಯಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.