ADVERTISEMENT

ರೇಣುಕಸ್ವಾಮಿ ಕೊಲೆ: ಮೂವರಿಗೆ ಜಾಮೀನು; ದರ್ಶನ್‌ ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 22:28 IST
Last Updated 23 ಸೆಪ್ಟೆಂಬರ್ 2024, 22:28 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 16ನೇ ಆರೋಪಿಯಾದ ಕೇಶವಮೂರ್ತಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಕುರಿತಂತೆ ಕೇಶವಮೂರ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಿತು.

ಕೊಲೆ ಪ್ರಕರಣದ 15 ಹಾಗೂ 17ನೇ ಆರೋಪಿಗಳಾದ ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಅವರಿಗೆ 57ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೂವರೂ ಆರೋಪಿಗಳು ತುಮಕೂರು ಕಾರಾಗೃಹದಲ್ಲಿ ಇದ್ದಾರೆ.

ADVERTISEMENT

ಈ ಮೂವರು ದರ್ಶನ್ ಆಪ್ತರಿಂದ ತಲಾ ₹ 5 ಲಕ್ಷ ಪಡೆದುಕೊಂಡು, ತಾವೇ ರೇಣುಕಸ್ವಾಮಿ ಕೊಲೆ ಮಾಡಿರುವುದಾಗಿ ಠಾಣೆಗೆ ಬಂದು ಶರಣಾಗಿದ್ದರು.

ದರ್ಶನ್‌ ಅರ್ಜಿ ವಿಚಾರಣೆ ಮುಂದೂಡಿಕೆ:

ಜಾಮೀನು ಕೋರಿ ನಟ ದರ್ಶನ್ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನ ಕುಮಾರ್, ‘ಜಾಮೀನು ಮಂಜೂರು ಮಾಡಕೂಡದು. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ಸೆಪ್ಟೆಂಬರ್‌ 27ಕ್ಕೆ ವಿಚಾರಣೆ ಮುಂದೂಡಿದರು. ಇದೇ ವೇಳೆ ಪ್ರಕರಣದ ಒಂದನೇ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.