ADVERTISEMENT

ಎಂಪ್ರಿ ವರದಿ ಉಲ್ಲಂಘಿಸಿ ‘ಬಫರ್‘ ಮೊಟಕು

ಎಚ್‌ಡಿಕೆ ನೇತೃತ್ವದ ಮೈತ್ರಿ ಸರ್ಕಾರ ಕೈಗೊಂಡ ಕೊನೆಯ ನಿರ್ಧಾರ– ಟಿ.ಜಿ. ಹಳ್ಳಿ ಜಲಾನಯನಕ್ಕೆ ತಂದ ಕಂಟಕ

ಆರ್. ಮಂಜುನಾಥ್
Published 12 ಅಕ್ಟೋಬರ್ 2023, 21:11 IST
Last Updated 12 ಅಕ್ಟೋಬರ್ 2023, 21:11 IST
ಯಲ್ಲಪ್ಪ ರೆಡ್ಡಿ
ಯಲ್ಲಪ್ಪ ರೆಡ್ಡಿ   

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಬಫರ್‌ ವಲಯದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ‍್ರಿ) ವರದಿ ನೀಡಿದ್ದರೂ, ಐದು ವರ್ಷದ ಹಿಂದಿದ್ದ ಮೈತ್ರಿ ಸರ್ಕಾರ ಅದನ್ನು ಉಲ್ಲಂಘಿಸಿದೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನವಾಗುವುದಕ್ಕೆ ಮೂರು ದಿನ ಮುನ್ನ ಹೊಸ ಆದೇಶವನ್ನು ಹೊರಡಿಸಲಾಗಿದ್ದು, ಬಫರ್‌ ವಲಯವನ್ನು ಕಡಿಮೆಗೊಳಿಸಲಾಗಿದೆ.

ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಜಲಾನಯನ ಪ್ರದೇಶ ಸಂರಕ್ಷಣೆಗೆ  2003ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, 2013ರಲ್ಲಿ ಕೆಲವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸ್ಥಳ ಪರಿಶೀಲನೆ ನಡೆಸಿ, ವಾಸ್ತವ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲು ಎಂಪ್ರಿಗೆ ಹೈಕೋರ್ಟ್‌ ಸೂಚಿಸಿತ್ತು. 2015ರ ಆಗಸ್ಟ್‌ನಲ್ಲಿ ಎಂಪ್ರಿ ವರದಿ ಸಲ್ಲಿಸಿದೆ.

ADVERTISEMENT

ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ವಲಯ–1ರಲ್ಲಿ 550 ಹಳ್ಳಿಗಳು, ದೊಡ್ಡಬಳ್ಳಾಪುರ, ಪೀಣ್ಯ, ಸೋಂಪುರ, ದಾಬಸ್‌ಪೇಟೆ ಕೈಗಾರಿಕೆ ಪ್ರದೇಶಗಳಿವೆ. ಈ ಪ್ರದೇಶಗಳಲ್ಲಿ ವಸತಿ ಹಾಗೂ ಕೈಗಾರಿಕೆ ಪ್ರದೇಶಗಳ ತ್ಯಾಜ್ಯಗಳು ನೇರವಾಗಿ ನದಿಯ ಒಡಲಿಗೆ ಸೇರಿಕೊಳ್ಳುತ್ತಿವೆ. ಇದಲ್ಲದೆ, ಘನತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯಗಳನ್ನೂ ಹಾಕಲಾಗುತ್ತಿದೆ. ವಲಯ– 2ರಲ್ಲಿ, ನಾಲ್ಕು ತಾಲ್ಲೂಕುಗಳ 33 ಹಳ್ಳಿಗಳಿದ್ದು, 19 ಬಡಾವಣೆಗಳು ಹಾಗೂ ಎರಡು ಉಗ್ರಾಣಗಳು ನಿರ್ಮಾಣವಾಗಿವೆ. ಇವುಗಳು ನದಿಯ ಹರಿವನ್ನೇ ಬದಲಿಸಿವೆ.

ವಲಯ– 3 ಮತ್ತು ವಲಯ– 4ರಲ್ಲಿ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆಯಿಂದ ನೈಸರ್ಗಿಕ ಕಾಲುವೆ ಹಾಳಾಗುತ್ತಿದೆ. ಘನ– ದ್ರವ ತ್ಯಾಜ್ಯಗಳು ನೇರವಾಗಿ ಜಲಾಶಯದ ನೀರಿಗೆ ತಲುಪುತ್ತಿವೆ. ಕೈಗಾರಿಕೆ ಹಾಗೂ ಕೃಷಿಗಾಗಿ ಈ ಭಾಗದಲ್ಲಿ ನೀರನ್ನು ಅತಿಹೆಚ್ಚಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅರ್ಕಾವತಿ ನದಿ ಪಾತ್ರದಲ್ಲಿರುವ ಕೈಗಾರಿಕೆಗಳು ತಮ್ಮ ರಾಸಾಯನಿಕ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹರಿಬಿಟ್ಟಿದ್ದು, ನೀರು ಅತ್ಯಂತ ಕಲ್ಮಶವಾಗಿದೆ ಎಂದು ಎಂಪ್ರಿ ವರದಿ ನೀಡಿದೆ.

ನದಿ ಪುನಶ್ಚೇತನಕ್ಕೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹತ್ತಾರು ಸಲಹೆಗಳನ್ನು ನೀಡಿರುವ ಎಂಪ್ರಿ, ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಜಲಾನಯನ ಪ್ರದೇಶದ ಸಂರಕ್ಷಣೆಗೆ ಕಾನೂನುಬದ್ಧವಾದ ಪ್ರಾಧಿಕಾರ ರಚಿಸುವವರೆಗೂ 2003ರ ಆದೇಶದಂತೆಯೇ ಬಫರ್‌ ವಲಯವನ್ನು ಸಂರಕ್ಷಿಸಬೇಕು ಎಂದು ಹೇಳಿದೆ. ಆದರೆ, ಸಂರಕ್ಷಣೆಯ ಯಾವ ಸಲಹೆಗಳನ್ನೂ ಅನುಷ್ಠಾನ ಮಾಡದಿದಿದ್ದ ಹಿಂದಿನ ಸರ್ಕಾರ, ಬಫರ್‌ ವಲಯದ ವ್ಯಾಪ್ತಿಯನ್ನು ಕಡಿಮೆ ಮಾಡಿ ಆದೇಶಿಸಿತ್ತು.

2003ರಿಂದ 2014ರ ಅವಧಿ

* ವಲಯ–1: ನಿರ್ಮಾಣ ಪ್ರದೇಶ ಶೇ 2.24ರಿಂದ ಶೇ 4.69ಕ್ಕೆ ಹೆಚ್ಚಳ. 

* ವಲಯ–2: ಬಡಾವಣೆ ನಿರ್ಮಾಣ ಶೇ 1.26ರಿಂದ ಶೇ 4.52ಕ್ಕೆ ವೃದ್ಧಿ

*ವಲಯ– 3: ಅಭಿವೃದ್ಧಿಗಳ ಪ್ರದೇಶಗಳು ಶೇ 4.39ರಿಂದ ಶೇ 6.28ಕ್ಕೆ; ಬಡಾವಣೆ ನಿರ್ಮಾಣ ಶೇ 0.89ರಿಂದ ಶೇ 6.60ಕ್ಕೆ ಹೆಚ್ಚಳ.

* ವಲಯ– 4: ಬಡಾವಣೆಗಳ ನಿರ್ಮಾಣ ಶೇ 1.99ರಿಂದ ಶೇ 9.46ಕ್ಕೆ ಏರಿಕೆ

ಎಂಪ್ರಿ ಸಲಹೆಗಳು

* ನದಿ ಪಾತ್ರದ ಸಂರಕ್ಷಣೆಗೆ ಬಹು–ಶಿಸ್ತು ಸಮಿತಿ ಸ್ಥಾಪನೆ

* ಅಕ್ರಮ ಅನಧಿಕೃತ ಅಡೆ–ತಡೆಗಳ ತೆರವು

* ಅನಧಿಕೃತ ಕ್ವಾರಿ ಮರಳು ಗಣಿಗಾರಿಕೆಗೆ ನಿಷೇಧ

* ನದಿ ಕೆರೆ ದಡದ ಒತ್ತುವರಿ ತೆರವು

* ನದಿ ಹರಿಯಲು ಕೆರೆ ಜಾಲದ ಪುನಶ್ಚೇತನ

* ಕೈಗಾರಿಕೆ ತ್ಯಾಜ್ಯ ನದಿಗೆ ಹರಿಯುವುದಕ್ಕೆ ತಡೆ

* ತ್ಯಾಜ್ಯ ನಿರ್ವಹಣೆ ಸಂಸ್ಕರಣೆ ಬಗ್ಗೆ ತಂತ್ರಜ್ಞಾನ ಅಳವಡಿಕೆ

* ಅಂತರ್ಜಲ ಬಳಕೆಯಲ್ಲಿ ನಿಯಂತ್ರಣ ಮತ್ತು ನಿರ್ವಹಣೆ

* ಮಳೆ ನೀರು ಸಂಗ್ರಹಕ್ಕೆ ಸಮಗ್ರ ಯೋಜನೆ

* ನದಿಪಾತ್ರದಲ್ಲಿ ಹಸಿರು ಬೆಳೆಸಲು ಪ್ರೋತ್ಸಾಹ

ರಾತ್ರೋರಾತ್ರಿ ಸಾಧನೆ ಸಾಧ್ಯವಿಲ್ಲ!

ನದಿ ಪುನಶ್ಚೇತನವನ್ನು ರಾತ್ರೋರಾತ್ರಿ ಸಾಧಿಸಲಾಗುವುದಿಲ್ಲ. ನಮ್ಮ ಗುರಿಯನ್ನು ಸಾಧಿಸಬೇಕಾದರೆ 20 ವರ್ಷ ಸಂರಕ್ಷಣಾ ಕಾರ್ಯಗಳನ್ನು ನಡೆಸಬೇಕು. ಯೋಜನೆಯ ಸಮಗ್ರ ಚಿತ್ರಣವನ್ನು ರೂಪಿಸಿ ಲಭ್ಯವಿರುವ ಕನಿಷ್ಠ ಸಂಪನ್ಮೂಲಗಳಿಂದ ಗುರಿ ಸಾಧನೆಯನ್ನು ಯೋಜಿಸಬೇಕು ಎಂದು ಎಂಪ್ರಿ ವರದಿ ಹೇಳಿತ್ತು. ಈ ಸಲಹೆಯನ್ನು 2013ರಿಂದಾದರೂ ಅಳವಡಿಸಿಕೊಂಡಿದ್ದರೆ ಇಷ್ಟೊತ್ತಿಗೆ ನದಿ ಉಳಿಸುವ ಅಲ್ಪ ಹಾದಿಯನ್ನಾದರೂ ಕ್ರಮಿಸಬಹುದಿತ್ತು ಎಂಬುದು ಪರಿಸರ ಕಾಳಜಿಯುಳ್ಳವರ ವಾದ.

ರಾಜಕೀಯ ರಿಯಲ್‌ ಎಸ್ಟೇಟ್‌ ಲಾಬಿಗೆ ಮನ್ನಣೆ

ನದಿ ರಕ್ಷಿಸಬೇಕು ನದಿಪಾತ್ರ ಉಳಿಸಿಕೊಳ್ಳಬೇಕು ಜನರಿಗೆ ಶುದ್ಧವಾದ ನೀರು ಕೊಡಬೇಕು ಎಂಬ ರಾಜಕೀಯ ಇಚ್ಛಾಶಕ್ತಿ ಕಾಣಿಸುತ್ತಿಲ್ಲ. ರಾಜಕೀಯ ಹಾಗೂ ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿದು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಬಫರ್‌ ವಲಯವನ್ನು ಕಡಿಮೆ ಮಾಡಲಾಗುತ್ತಿದೆ. 2003ರಲ್ಲಿದ್ದ ಆದೇಶವನ್ನು ಜಾರಿಗೆ ತಂದಿದ್ದರೆ ಈ 20 ವರ್ಷಗಳಲ್ಲಿ ನಾವು ಪರಿಸರಯುಕ್ತ ಶುದ್ಧ ನೀರಿನ ಹರಿವನ್ನು ಇಲ್ಲಿ ಕಾಣಬಹುದಿತ್ತು. ಆದರೆ ಆದೇಶ ಜಾರಿ ಮಾಡಿ ಸುಮ್ಮನೆ ಕುಳಿತುಕೊಂಡು ಅಕ್ರಮ ಅನಧಿಕೃತ ನಿರ್ಮಾಣಗಳಾಗಲು ರಾಜಕಾರಣಿಗಳೇ ಕಾರಣರಾಗಿದ್ದಾರೆ. ಭೂತಾಯಿಯ ಮೇಲೆ ದೌರ್ಜನ್ಯ ಎಸಗಿರುವ ಕ್ರಿಮಿನಲ್‌ಗಳು ಇವರು.  ಈ ಹಿಂದೆ ಟೌನ್‌ಶಿಪ್ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದ್ದರೂ ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲರು ಅದರ ವಿರುದ್ಧ ಕ್ರಮ ಕೈಗೊಂಡಿದ್ದರು. ಸಚಿವ ಸಂಪುಟ ಸಭೆಯಲ್ಲಿ ಟೌನ್‌ಶಿಪ್‌ ನಿರ್ಮಾಣಕ್ಕೆ ಸಮ್ಮತಿ ನಿರಾಕರಿಸಿ ನ್ಯಾಯಾಲಯ ನಿಂದನೆಯಾದರೂ ಎದುರಿಸುತ್ತೇವೆ ಎಂದಿದ್ದರು. ಅವರ ಅಂದಿನ ನಿರ್ಧಾರದಿಂದಲೇ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ಇಷ್ಟಾದರೂ ಉಳಿದುಕೊಂಡಿದೆ.
-ಯಲ್ಲಪ್ಪರೆಡ್ಡಿ, ಪರಿಸರ ತಜ್ಞ 

ಕುಡಿಯುವ ನೀರು ನೀಡುವ ಉದ್ದೇಶವಿದ್ದರೆ ಬಫರ್‌ ಉಳಿಸಿ

ಬೆಂಗಳೂರಿನ ಶೇ 25ರಷ್ಟು ಪ್ರದೇಶಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಇಂದು ಅಲ್ಲಿನ ನೀರು ಹರಿಯುವ ಪ್ರದೇಶವನ್ನೇ ಹಾಳು ಮಾಡಲಾಗಿದೆ.  ಬಫರ್‌ ವಲಯದಲ್ಲಿ ಗಿಡ–ಮರ ಹುಲ್ಲು–ಕಂಟಿ ಇರಬೇಕು. ಅವುಗಳು ಮಳೆ ನೀರನ್ನು ಹಿಡಿದುಕೊಂಡು ಜಲ ಜಿನುಗುವಂತೆ ಮಾಡುತ್ತವೆ. ಪ್ರಾಣಿ–ಪಕ್ಷಿಗಳಿರಬೇಕು. ಇದೇ ಪರಿಸರ ವೈವಿಧ್ಯ. ಇವುಗಳಿಲ್ಲದೆ ಕಟ್ಟಡಗಳನ್ನು ಉಳಿಸುವುದಕ್ಕಾಗಿ ಬಫರ್‌ ವಲಯ ಕಡಿಮೆ ಮಾಡಲು ಹೊರಟಿರುವುದು ದುರಂತ. ಸಾವಿರಾರು ಕೋಟಿ ವೆಚ್ಚ ಮಾಡಿ ನೂರಾರು ಕಿ.ಮೀ ದೂರದಿಂದ ಕುಡಿಯುವ ನೀರು ತರುತ್ತಿದ್ದೇವೆ. ಇಲ್ಲಿರುವ ನೀರನ್ನು ಕಲುಷಿತಗೊಳಿಸಿ ಕೈಗಾರಿಕೆಗಳಿಗೆ ಅನುವು ಮಾಡಿಕೊಡುತ್ತಿರುವುದು ವಿಷಾದನೀಯ.  ನಾಳೆಯ ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಕೊಡಬೇಕು ಎಂಬ ಮನಸ್ಸು ಸರ್ಕಾರಕ್ಕೆ ಇದ್ದರೆ ಬಫರ್‌ ವಲಯ ಕಡಿಮೆ ಮಾಡಬಾರದು. 2003ರ ಆದೇಶದಲ್ಲಿರುವುದಕ್ಕಿಂತ ಇನ್ನೂ ಹೆಚ್ಚಿನ ಬಫರ್‌ ವಲಯ ಇದ್ದರೇ ಒಳ್ಳೆಯದು. 
– ಸುರೇಶ್‌ ಹೆಬ್ಳೀಕರ್‌ ಚಲನಚಿತ್ರ ನಟ ಹಾಗೂ ಪರಿಸರ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.