ಬೆಂಗಳೂರು: ನಗರದ ಪ್ರಮುಖ ಮೂರು ರೈಲ್ವೆ ಯೋಜನೆಗಳಿಗೆ ಕೇಂದ್ರದ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ರೈಲು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಡಿ.ಕೆ. ಸುರೇಶ್ ಅವರಿಗೆ ಪ್ರಜಾರಾಗ್, ಸಿಟಿಜನ್ಸ್ ಫಾರ್ ಬೆಂಗಳೂರು ಹಾಗೂ ಕರ್ನಾಟಕ ರೈಲ್ವೆ ವೇದಿಕೆಯ ಕಾರ್ಯಕರ್ತರು ಪತ್ರ ಬರೆದಿದ್ದಾರೆ.
‘ಬೆಂಗಳೂರು ನಗರದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಗೆ ₹250 ಕೋಟಿ, ಯಲಹಂಕದ- ದೇವನಹಳ್ಳಿ ನಡುವಿನ 30 ಕಿ.ಮೀ. ಮಾರ್ಗದ ವಿದ್ಯುದ್ದೀಕರಣಕ್ಕೆ ₹40 ಕೋಟಿ, ಯಶವಂತಪುರ ರೈಲ್ವೆ ನಿಲ್ದಾಣದ ಎರಡನೇ ಟರ್ಮಿನಲ್‌ಗೆ ₹120 ಕೋಟಿ ಮೀಸಲಿಡಲು ಹಣಕಾಸು ಸಚಿವರಿಗೆ ಮನವರಿಕೆ ಮಾಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಇವು ಕಡಿಮೆ ಅನುದಾನದ ಮತ್ತು ವೇಗವಾಗಿ ಅನುಷ್ಠಾನಗೊಳಿಸಬಹುದಾದ ಯೋಜನೆಗಳಾಗಿದ್ದು, ರೈಲ್ವೆ ಮಂಡಳಿ ಅನುಮತಿ ಪಡೆದು ಪಿಂಕ್ ಪುಸ್ತಕದಲ್ಲಿ ಸೇರಿಸಲು ತುರ್ತಾಗಿ ಒತ್ತಡ ಹೇರಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.