ಬೆಂಗಳೂರು: ‘ರಾಜಕೀಯ ಪ್ರಭಾವ ಬಳಸಿ ಮೀಸಲು ಅರಣ್ಯದ ಜಮೀನನ್ನು ಒತ್ತುವರಿ ಮಾಡಿರುವ ಆರೋಪದ ಮೇಲೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ನೋಂದಾಯಿತ ಅಂಚೆ ಮೂಲಕ ಸೋಮವಾರ ಮನವಿ ರವಾನಿಸಿರುವ ಅವರು, ‘ಬೋಸರಾಜು ಅವರ ಪತ್ನಿ ಎನ್. ಕೃಷ್ಣವೇಣಿ ಬೋಸರಾಜು ಅವರು ರಾಯಚೂರು ನಗರದ ವ್ಯಾಪ್ತಿಯಲ್ಲಿರುವ ಮೀಸಲು ಅರಣ್ಯಕ್ಕೆ ಸೇರಿದ 5 ಎಕರೆ 28 ಗುಂಟೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ತಮ್ಮ ಪತ್ನಿಯೂ ಸೇರಿದಂತೆ ನಾಲ್ವರು ಅರಣ್ಯ ಜಮೀನು ಒತ್ತುವರಿ ಮಾಡುವುದಕ್ಕೂ ಬೋಸರಾಜು ಅವರು ರಾಜಕೀಯ ಪ್ರಭಾವದ ಮೂಲಕ ನೆರವು ನೀಡಿದ್ದಾರೆ’ ಎಂದು ದೂರಿದ್ದಾರೆ.
2022ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕೃಷ್ಣವೇಣಿ ಮತ್ತು ಇತರ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಈ ರೀತಿ ಅರಣ್ಯ ಜಮೀನು ಕಬಳಿಸಲು ನೆರವು ನೀಡುವ ಮೂಲಕ ಸಚಿವರು ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟು 16 ಎಕರೆ 21 ಗುಂಟೆ ಅರಣ್ಯ ಜಮೀನು ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸಿಲ್ಲ. ಇದಕ್ಕೆ ರಾಜಕೀಯ ಪ್ರಭಾವವೇ ಕಾರಣ. ಸಚಿವರ ಪ್ರಭಾವಕ್ಕೆ ಮಣಿದು ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಮಾಡುತ್ತಿಲ್ಲ. ತಕ್ಷಣವೇ ಒತ್ತುವರಿ ತೆರವುಗೊಳಿಸಿ, ಜಮೀನನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.