ಬೆಂಗಳೂರು: ನಗರದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಡೆಯುವ ಹೊಸ ವರ್ಷದ ಸಂಭ್ರಮಾಚರಣೆಗೆ ಅನುಮತಿ ನೀಡದಂತೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಕೆಲವು ಹಿಂದೂಪರ ಸಂಘಟನೆಗಳು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಮನವಿ ಸಲ್ಲಿಸಿವೆ.
ಗುರುವಾರ ಮಧ್ಯಾಹ್ನ ಪೊಲೀಸ್ ಆಯುಕ್ತರನ್ನು ಭೇಟಿಯಾದ ಸಮಿತಿ ಅಧ್ಯಕ್ಷ ಮೋಹನ್ ಗೌಡ, ‘ಹೊಸ ವರ್ಷದ ಹೆಸರಿನಲ್ಲಿ ಡಿ. 31ರ ಮಧ್ಯರಾತ್ರಿ 12 ಗಂಟೆಗೆ ಧೂಮಪಾನ, ಮದ್ಯಪಾನ, ಅಮಲು ಪದಾರ್ಥ ಸೇವನೆ, ಅಶ್ಲೀಲ ನೃತ್ಯ ಮುಂತಾದವು ಹೆಚ್ಚಾಗಿರುತ್ತದೆ. ಹಾಗೆಯೇ ಇತ್ತೀಚಿನ ಕೆಲವು ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿವೆ. ಇದರಿಂದ ಬೆಂಗಳೂರಿನ ಪಾವಿತ್ರ್ಯತೆ ಹಾಳಾಗುತ್ತಿದೆ’ ಎಂದರು.
‘ಹೀಗಾಗಿ, ಈ ಬಾರಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಚಾರಣೆಗೆ ನಿರ್ಬಂಧ ಹೇರಬೇಕು. ನಗರದ ಕೋಟೆ, ಪ್ರವಾಸಿತಾಣ, ಐತಿಹಾಸಿಕ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ, ಪಾರ್ಟಿ ಮಾಡುವುದನ್ನು ನಿಷೇಧಿಸಬೇಕು. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದೂ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.