ADVERTISEMENT

ಪಡಿತರ: ನಗದು ಬದಲು ರಾಗಿ, ಜೋಳ ವಿತರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 15:44 IST
Last Updated 13 ಫೆಬ್ರುವರಿ 2024, 15:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಗೆ ಪರ್ಯಾಯವಾಗಿ ನಗದು ನೀಡುವ ಬದಲು ರಾಗಿ, ಜೋಳ ವಿತರಿಸಬೇಕು’ ಎಂದು ‘ಆಹಾರದ ಹಕ್ಕಿಗಾಗಿ ಆಂದೋಲನ’ ಮತ್ತು ‘ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ’ ಆಂದೋಲನದ ಸದಸ್ಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಇಲಾಖೆ ಸಚಿವ ಕೆ.ಎಚ್‌. ಮುನಿಯಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ರಾಗಿ, ಜೋಳ ನೀಡಲು ಅಗತ್ಯವಿರುವ ಹಣವನ್ನು ಬಜೆಟ್‌ನಲ್ಲಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

‘5 ಕೆ.ಜಿ ಅಕ್ಕಿಯ ಬದಲು ₹170 ನಗದನ್ನು ನೀಡುವುದು ಬೇಡ. ಪ್ರದೇಶಕ್ಕನುಗುಣವಾಗಿ ರಾಗಿ ಅಥವಾ ಜೊಳ ನೀಡಲಿ. ಇವುಗಳಿಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರ ಕೂಡಲೇ ಖರೀದಿಸಬೇಕು. ಇದಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಮೊತ್ತವನ್ನು ಅನುದಾನವಾಗಿ ಪ್ರಸ್ತುತ ಆಯವ್ಯಯದಲ್ಲಿ ಘೋಷಿಸಬೇಕು’ ಎಂದು ಮನವಿ ಮಾಡಿ ಮಾಡಿದ್ದಾರೆ.

‘2024–25ನೇ ಸಾಲಿನಲ್ಲಿ ರಾಗಿ ಮತ್ತು ಜೋಳವನ್ನು ಹೆಚ್ಚು ಬೆಳೆಯಲು ರೈತರನ್ನು ಉತ್ತೇಜಿಸುವುದಕ್ಕಾಗಿ ಆಯವ್ಯಯದಲ್ಲಿ ಪಡಿತರಕ್ಕೆ ಅವಶ್ಯವಿರುವಷ್ಟು ರಾಗಿ, ಜೋಳ ಖರೀದಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಬೇಕು. ಜೋಳ ತಿನ್ನುವ ಪ್ರದೇಶದಲ್ಲಿ ರಾಗಿ ವಿತರಣೆ, ಒಂದೆರಡು ತಿಂಗಳಷ್ಟೇ ವಿತರಿಸಿ ಬಳಿಕ ಸ್ಥಗಿತಗೊಳಿಸುವುದು, ಧಾನ್ಯಗಳ ಕಳಪೆ ಗುಣಮಟ್ಟ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟವೇನಲ್ಲ. ಈ ಬಗ್ಗೆ ರೈತರು, ರೈತ ಹಿತಾಸಕ್ತಿಯ ಸಂಘ-ಸಂಸ್ಥೆಗಳು ಮತ್ತು ‘ಆಹಾರದ ಹಕ್ಕಿಗಾಗಿ ಆಂದೋಲನದ’ ಕಾರ್ಯಕರ್ತರೊಂದಿಗೆ  ಸಮಾಲೋಚನಾ ಸಭೆಯನ್ನು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬಹುದು’ ಎಂದು ಹೇಳಿದ್ದಾರೆ.

ಆಂದೋಲನದ ಸದಸ್ಯರಾದ ನೀಲಯ್ಯ, ಶಾರದಾ ಗೋಪಾಲ್, ಕೆ.ಪಿ.ಸುರೇಶ್, ವಿ.ಗಾಯತ್ರಿ, ವತ್ಸಲಾ ಆನೇಕಲ್, ಎಸ್. ನವೀನ್, ಆಂಜನೇಯ ರೆಡ್ಡಿ, ದ್ವಿಜಿ ಗುರು, ವಿಶಾಲಕ್ಷಿ ಶರ್ಮ, ಝಾನ್ಸಿ ಲಕ್ಷ್ಮಿ ರಾಣಿ, ಜ್ಯೋತಿ ರಾಜ್, ಪದ್ಮರಾಜು, ಎಂ.ಆರ್.ರಕ್ಷಿತ್, ಕೆ. ಮಂಜುನಾಥ್, ಕೆ. ಕೊಟ್ರೇಶ್, ಫಣೀಶ್, ರಮೇಶ್ ಚೀಮಾಚನಹಳ್ಳಿ, ಸುವರ್ಣ ಕುಠಾಳೆ ಅವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.