ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಕೃಷ್ಣ ಮೃಗಗಳ ಆವಾಸ ಸ್ಥಾನವಾಗಿದ್ದು, ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ‘ಸಮುದಾಯ ಮೀಸಲು ಪ್ರದೇಶ’ ನಿರ್ಮಾಣ ಅಗತ್ಯ ಎಂದು ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆ್ಯಂಡ್ ಅನಿಮಲ್ಸ್ (ಎಸ್‌ಪಿಪಿಎ) ಹೇಳಿದೆ.
‘ಇಂಡಿ ತಾಲ್ಲೂಕಿನಲ್ಲಿ ಎರಡು ವರ್ಷಗಳ ಹಿಂದೆ ಬೆರಳೆಣಿಕೆಯಷ್ಟಿದ್ದ ಕೃಷ್ಣ ಮೃಗಗಳ ಸಂಖ್ಯೆ ಈಗ 300ಕ್ಕೆ ಏರಿಕೆಯಾಗಿದೆ. ಕಡಿಮೆ ಸಮಯದಲ್ಲಿ ಅವುಗಳ ಸಂಖ್ಯೆ ಏರಿಕೆಯಾಗಿರುವುದು ಮಹತ್ವದ ಬೆಳವಣಿಗೆ’ ಎಂದು ಎಸ್‌ಪಿಪಿಎ ಸಂಸ್ಥಾಪಕ ಧ್ರುವ ಪಾಟೀಲ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
‘ರೈತರು ಈ ವನ್ಯಜೀವಿಗಳ ಜತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಕೃಷ್ಣಮೃಗ ಎಂದು ಕರೆಯುವುದರಿಂದ ಅವುಗಳ ಬಗ್ಗೆ ಜನರಿಗೆ ದೈವಿಕ ಭಾವನೆ ಇದೆ. ಆದ್ದರಿಂದ ಅವುಗಳ ಪ್ರಾಣಕ್ಕೆ ಈವರೆಗೆ ಅಪಾಯ ಬಂದಿಲ್ಲ. ಆದರೆ, ಬೆಳೆಗಳನ್ನು ರಕ್ಷಿಸಿ ಕೊಳ್ಳಲು ಕೆಲ ರೈತರು ವಿದ್ಯುತ್ ತಂತಿ ಬೇಲಿ ನಿರ್ಮಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಾಣಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ
ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಸಮುದಾಯ ಮೀಸಲು ಪ್ರದೇಶ ನಿರ್ಮಿಸುವುದು ಸೂಕ್ತ ಎಂಬ ಸಲಹೆಯನ್ನು ಅರಣ್ಯ ಇಲಾಖೆಗೆ ನೀಡಿದ್ದೇವೆ. ಅದು ಸಾಕಾರಗೊಂಡರೆ ಕೃಷ್ಣಮೃಗಗಳ ರಕ್ಷಣೆ ಜತೆಗೆ ರೈತರ ಬೆಳೆಗಳೂ ಉಳಿಯುತ್ತವೆ’ ಎಂದು ಅವರು ತಿಳಿಸಿದರು.
‘ಅಧಿಕಾರಿಗಳ ಮಟ್ಟದಲ್ಲಿ ಪೂರಕ ಸ್ಪಂದನ ದೊರಕಿದೆ. ಇಂಡಿ ತಾಲ್ಲೂಕಿನ ನಂದರ್ಗಿ, ಜೇವೂರ, ಧುಮುಕೂಳ, ಬರ್ದೂಳ, ಶಿಗ್ನಾಪುರ ಸುತ್ತಮುತ್ತ 400ರಿಂದ 500 ಎಕರೆ ಜಾಗವನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವ ಬಗ್ಗೆ ಚರ್ಚೆಗಳು ನಡೆದಿವೆ’ ಎಂದು ಹೇಳಿದರು.
‘ಇಲ್ಲಿರುವ ಕೃಷ್ಣಮೃಗಗಳ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ಸಿದ್ಧಪಡಿಸುವ ತಯಾರಿಯಲ್ಲಿದ್ದೇವೆ. ಚಿತ್ರ ಮತ್ತು ವಿಡಿಯೊಗಳನ್ನು ಸೆರೆ ಹಿಡಿಯಲು ಎರಡು–ಮೂರು ವರ್ಷಗಳಷ್ಟು ಸಮಯ ಬೇಕಾಗುತ್ತದೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.