ಯಲಹಂಕ: ಸಂಪಿಗೆಹಳ್ಳಿ ಸಮೀಪದ ವೆಂಕಟೇಶಪುರ ಗ್ರಾಮದಲ್ಲಿ ಬಾರ್ (ಎಂ.ಆರ್.ಪಿ) ಆರಂಭ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಬಾರ್ ಸ್ಥಳಾಂತರದವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.ಬಾರ್ ಮಾಲೀಕರು ಮಂಗಳವಾರ ಬಾರ್ ಬಾಗಿಲು ತೆರೆಯಲು ಮುಂದಾದಾಗ ತಡೆಯೊಡ್ಡಿದರು.
‘ಬಾರ್ ತೆರೆದಿರುವ ಜಾಗದಲ್ಲಿದ್ದ ಸಾರ್ವಜನಿಕ ನೀರಿನ ತೊಟ್ಟಿ ಕೆಡವಿದ್ದು, ನೀರಿಗಾಗಿ ಅಲೆದಾಡಬೇಕಾಗಿದೆ. ಹತ್ತಿರವೇ ಶಾಲೆ, ತೋಟಗಳಿವೆ. ಮಹಿಳೆಯರು ಮತ್ತು ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇಂತಹ ಜಾಗದಲ್ಲಿ ಬಾರ್ ತೆರೆದರೆ ಭಯದ ವಾತಾವರಣ ನಿರ್ಮಾಣವಾಗಿ ಸಮಸ್ಯೆ ಎದುರಿಸಬೇಕಿದೆ’ ಎಂದು ಇಲ್ಲಿನ ಮಹಿಳೆಯರು ದೂರಿದರು.
‘ಕಟ್ಟಡದ ಮಾಲೀಕ ಮಂಜುನಾಥ್ ಎಂಬುವರು ಸರ್ಕಾರಿ ಉದ್ಯೋಗಿ. ಸರ್ಕಾರಿ ನೌಕರರೇ ನಿಯಮ ಗಾಳಿಗೆ ತೂರಿ, ವಸತಿ ಪ್ರದೇಶದಲ್ಲಿ ಇಂತಹ ಜನವಿರೋಧಿ ಕೃತ್ಯಕ್ಕೆ ಅವಕಾಶ ನೀಡಿದರೆ ಬೇರೆಯವರ ಪಾಡೇನು’ ಎಂದು ಸ್ಥಳೀಯ ನಿವಾಸಿ ದೇವಿಕಾ ಪ್ರಶ್ನಿಸಿದರು.
‘ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಗ್ರವಾಗಿ ಪರಿಶೀಲನೆ ನಡೆಸಬೇಕು. ವಾಸ್ತವ ಸ್ಥಿತಿಯನ್ನು ಅರಿಯದೆ, ಕೇವಲ ಶುಲ್ಕ ನೀಡಿದ ಮಾತ್ರಕ್ಕೆ ಬಾರ್ ತೆರೆಯಲು ಪರವಾನಗಿ ನೀಡುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಮದ್ಯದಂಗಡಿ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಅಬಕಾರಿ ಇಲಾಖೆಯ ಉಪ ಆಯುಕ್ತರು ಹಾಗೂ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.ಅಂಗಡಿಯನ್ನು ಸ್ಥಳಾಂತರ ಮಾಡದಿದ್ದರೆ ಹೋರಾಟ ಮುಂದುವರಿಸಲಿದ್ದೇವೆ’ ಎಂದು ಸ್ಥಳೀಯ ನಿವಾಸಿ ದಿಲೀಪ್ ಕುಮಾರ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.